ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮೆರಿಕ ಮೂಲದ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳಿಗೆ ಕೋರ್ಟ್ ಮಂಗಳವಾರ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ನ ಇಬ್ಬರು ಸಿಬ್ಬಂದಿ ಸೇರಿದಂತೆ ಓರ್ವ ಟೂರ್ ಗೈಡ್ ಹಾಗೂ ಚಾಲಕನೊಬ್ಬನನ್ನು ಬಂಧಿಸಿದ್ದ ಪೊಲೀಸರು ಇಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಏಪ್ರಿಲ್ ನಲ್ಲಿ ಫೈವ್ ಹೋಟೆಲ್ ವೊಂದರಲ್ಲಿ ಹೋಟೆಲ್ ನ ಸಿಬ್ಬಂದಿಗಳು ಸೇರಿದಂದೆ ಐವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅಮೆರಿಕ ಮೂಲದ ಮಹಿಳೆ ಪೊಲೀಸರು ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು ಡಿಸೆಂಬರ್ 3 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಮತ್ತೋರ್ವನಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ. ಬಂಧಿತ ಆರೋಪಿಗಳ ಕುರಿತಂತೆ ಮಾಹಿತಿ ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.