

ಪುಣೆ: ಕೆಲ ದಿನಗಳ ಹಿಂದಷ್ಟೇ ಭೀಕರವಾಗಿ ಹತ್ಯೆಯಾಗಿದ್ದ ಪುಣೆ ಟೆಕ್ಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಯುವಕನೊಬ್ಬನನ್ನು ಬಂಧನಕ್ಕೊಳಪಡಿಸಿರುವುದಾಗಿ ಗುರುವಾರ ತಿಳಿದುಬಂದಿದೆ.
ಸಂತೋಷ್ ಕುಮಾರ್ (25) ಬಂಧಿತ ಯುವಕನಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಸಂತೋಷ್ ಅವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ರಾಜ್ಯ ಪೊಲೀಸರ ತಂಡ ಯುವಕನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಆರೋಪಿ ಸಂತೋಷ್ ಕುಮಾರ್ ಚಾಣಾಕ್ಷ್ಯ ಬುದ್ಧಿಯನ್ನು ಉಪಯೋಗಿಸಿ ಹತ್ಯೆ ಮಾಡಿದ್ದಾರೆ. ವಿಚಾರಣೆ ವೇಳೆ ಹತ್ಯಾಯಾದ ದಿನದಂದು ತಾನು ಬೆಂಗಳೂರಿನಲ್ಲಿಯೇ ಇದ್ದೆ ಎಂದು ಹೇಳಿಕೊಳ್ಳುತ್ತಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ರಾಜಕುಮಾರ್ ಶಿಂಧೆ ಅವರು ಹೇಳಿದ್ದಾರೆ.
ಮಗಳ ಸಾವು ಕುರಿತಂತೆ ಮಾತನಾಡಿದ್ದ ಪೋಷಕರು, ಯುವಕನೊಬ್ಬ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
ಸಂತೋಷ್ ಕುಮಾರ್ ಕೂಡ ಐಟಿ ವೃತ್ತಿಪರನಾಗಿದ್ದು, ಬೆಂಗಳೂರಿನಲ್ಲಿದ್ದುಕೊಂಡೇ ಕೊಲೆ ಮಾಡಲು ಇತರರಿಗೆ ಸುಪಾರಿ ನೀಡಿದ್ದ ಎಂದು ಶಿಂಧೆ ಅವರು ಹೇಳಿದ್ದಾರೆ.
ಇದೀಗ ಸಂತೋಷ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 120(ಬಿ) (ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ಸಂತೋಷ್ ಕುಮಾರ್ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿದ್ದು, ಹತ್ಯೆಯಾದ ದಿನದಂದು ತಾನು ಬೆಂಗಳೂರಿನಲ್ಲಿಯೇ ಇದ್ದೆ ಎಂದು ಹೇಳಿಕೊಂಡಿದ್ದಾನೆ. ಸಂತೋಷ್ ಕುಮಾರ್ ಭಗ್ನ ಪ್ರೇಮಿಯಾಗಿದ್ದ. ಸಂತೋಷ್ ಪ್ರೀತಿಗೆ ಅಂತರಾ ನಿರಾಕರಿಸಿ ಸ್ನೇಹಿತನಂತೆಯೇ ಕಾಣುತ್ತಿದ್ದಳು. ತನ್ನ ಪ್ರೀತಿಗೆ ಒಪ್ಪಿಕೊಳ್ಳುವಂತೆ ಸಂತೋಷ್ ಅಂತರಾಗೆ ಬಲವಂತ ಮಾಡುತ್ತಿದ್ದನೆಂಬುದು ಸಂದೇಶಗಳ ಮುಖಾಂತರ ತಿಳಿದುಬಂದಿತ್ತು. ವಿಚಾರಣೆ ನಡೆಸಲಾಗುತ್ತಿದ್ದು, ಹಂತಕರಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಶಿಂಧೆ ಅವರು ತಿಳಿಸಿದ್ದಾರೆ.