

ಕೋಲ್ಕತಾ: ಕೋಲ್ಕತಾದ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆಯೊಂದು ಜ.16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೀಲ್ ಫೋನ್ಸೆಕಾ ಕೊಲೆ ಮಾಡಿದ ಉದ್ಯಮಿಯಾಗಿದ್ದು, ಜ.16 ರಾತ್ರಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಮಕ್ಕಳು ತಾಯಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಕುಪಿತನಾದ ಉದ್ಯಮಿ ತನ್ನ ಪತ್ನಿಯನ್ನೂ ಕೊಂದಿದ್ದಾನೆ. ನಂತರ ಮಕ್ಕಳಿಗೂ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಕೊಲೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ನಾಟಕವಾಡಲು ಆರಂಭ ಮಾಡಿರುವ ನೀಲ್ ಫೋನ್ಸೆಕಾ ನನ್ನ ಪತ್ನಿ ಮಕ್ಕಳನ್ನು ಸಾಯಿಸಿದ್ದಳು. ನಂತರ ನನ್ನನ್ನು ಸಾಯಿಸಲು ಬಂದಾಗ ಆಕೆಯಿಂದ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಆಕೆಯನ್ನು ಹತ್ಯೆ ಮಾಡಿದ್ದೇನೆಂದು ಹೇಳಿದ್ದಾರೆ.
ನಂತರ ತನಿಖೆ ನಡೆಸಿದ ಪೊಲೀಸರಿಗೆ ಘಟನೆಯ ಸತ್ಯಾಸತ್ಯತೆ ತಿಳಿದಿದೆ. ನೀಲ್ ಫೋನ್ಸೆಕಾ ಕೋಲ್ಕತಾದಲ್ಲಿ ಉನ್ನತ ಮಟ್ಟದಲ್ಲಿರುವ ಉದ್ಯಮಿಯಾಗಿದ್ದು, ದಂಪತಿಗಳಿಬ್ಬರು ತಮ್ಮ ಮಕ್ಕಳೊಂದಿಗೆ ಮದುವೆಯ ವಾರ್ಷಿಕೋತ್ಸವದ ಹಬ್ಬವನ್ನು ಆಚರಿಸಿ ಮನೆಗೆ ಬಂದಿದ್ದರು. ಇಬ್ಬರು ದಂಪತಿಗಳಿಗೆ ಓರ್ವ ಮಗಳಿದ್ದು ಆಕೆ ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ.
ಮದುವೆ ವಾರ್ಷಿಕೋತ್ಸವ ಆಚರಿಸಿ ಮನೆಗೆ ಬಂದ ದಂಪತಿಗಳು ತಡರಾತ್ರಿ ಇದ್ದಕ್ಕಿದ್ದಂತೆ ಜಗಳ ಮಾಡಿದ್ದಾರೆ. ನಂತರ ನೀಲ್ ಫೋನ್ಸೆಕಾ ಪತ್ನಿ ಜೆಸ್ಸಿಕಾ ಫೋನ್ಸೆಕಾಳನ್ನು ಹತ್ಯೆ ಮಾಡಿ, ಆಕೆಗೆ ಬೆಂಬಲ ನೀಡಿದ್ದ ಮಕ್ಕಳನ್ನು ಹತ್ಯೆ ಮಾಡಿದ್ದಾನೆ.
ಪ್ರಕರಣದ ತನಿಖೆ ವೇಳೆ ನೀಲ್ ಫೋನ್ಸೆಕಾರನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಡಂಬಲ್ಸ್ ನಿಂದ ಹೊಡೆದು ನನ್ನ ಪತ್ನಿಯನ್ನು ಕೊಲೆ ಮಾಡಿದೆ. ನಂತರ ಪತ್ನಿಯ ಜಗಳಕ್ಕೆ ನನ್ನ ಮಕ್ಕಳು ಬೆಂಬಲ ಸೂಚಿಸಿದ್ದರು. ಹೀಗಾಗಿ ಅವರನ್ನು ಚಾಕುವಿನಿಂದ ಇರಿದು ಹತ್ಯೆಮಾಡಿದೆ ಎಂದು ಹೇಳಿದ್ದಾನೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ನೀಲ್ ಫೋನ್ಸೆಕಾ ನಡೆಸುತ್ತಿರುವ ಆಂತರಿಕ ವಿನ್ಯಾಸ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿರುವುದರಿಂದ ಹಲವು ದಿನಗಳಿಂದಲೂ ಒತ್ತಡದಲ್ಲಿದ್ದ. ಹೀಗಾಗಿ ಪತ್ನಿಯೊಂದಿಗೆ ಪ್ರತಿ ನಿತ್ಯ ಜಗಳ ಮಾಡುತ್ತಿದ್ದ. ಇದಲ್ಲದೆ ನೀಲ್ ಗೆ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧವಿದ್ದರಿಂದ ಪತಿ-ಪತ್ನಿ ನಡುವೆ ವಿರಸ ಏರ್ಪಟ್ಟಿದೆ ಎಂದು ಹೇಳಿದ್ದಾರೆ. ಪ್ರಸ್ತುತ ನೀಲ್ ಫೋನ್ಸೆಕಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆತನನ್ನು ಬಂಧನಕ್ಕೊಳಪಡಿಸಿಲ್ಲ.