

ದಿಬ್ರುಘಢ್; ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಗಾಂಧಿ ಕುಟುಂಬದ ವಿರುದ್ಧ ಗುಡುಗಿದ್ದು, ಒಂದು ಕುಟುಂಬ ಇಡೀ ಸಂಸತ್ತನ್ನು ಹಾಳು ಮಾಡುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಯುಕ್ತ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಪ್ರಚಾರದ ವೇಳೆ ಗಾಂಧಿ ಕುಟುಂಬದ ವಿರುದ್ಧ ಗುಡುಗಿದ್ದಾರೆ. ಒಂದು ಕುಟುಂಬವಿದೆ. ಆ ಕುಟುಂಬ ನಮ್ಮನ್ನು ನಿರ್ಧಾರ ತೆಗೆದುಕೊಳ್ಳಲು ಬಿಡುತ್ತಿಲ್ಲ. ಒಂದು ಕುಟುಂಬದಿಂದ ಸಂಸತ್ತು ಹಾಳಾಗುತ್ತಿದೆ ಎಂದು ಯಾರೊಬ್ಬರ ಹೆಸರನ್ನು ತೆಗೆದುಕೊಳ್ಳದೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಒಂದು ಕುಟುಂಬ ಮಾತ್ರ ದೇಶದ ಅಭಿವೃದ್ಧಿಗೆ ಪ್ರಮುಖವಾಗಿರುವ ವ್ಯವಹಾರ ಹಾಗೂ ಇನ್ನಿತರೆ ವಿಷಯಗಳ ಕುರಿತಂತೆ ನಾವು ನಿರ್ಧಾರ ತೆಗೆದಕೊಳ್ಳಲು ಬಿಡುತ್ತಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಕಂಡ ಸೋಲಿಗೆ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆಂಬ ಅನುಮಾನಗಳು ಮೂಡುತ್ತಿವೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಕೆಲವು ಪ್ರತಿಪಕ್ಷದ ನಾಯಕರಿದ್ದಾರೆ. ನನ್ನ ವಿರುದ್ಧ ವಿರೋಧದ ಕೂಗುಗಳು ಕೇಳಿಬರುತ್ತಿದ್ದರೂ ಸಹ ಸಂಸತ್ತು ನಡೆಯಬೇಕೆಂದು ಆ ನಾಯಕರು ಬಯಸುತ್ತಾರೆ. ಆದರೆ, ಒಂದು ಕುಟುಂಬ ಮಾತ್ರ ಸಂಸತ್ತು ಕೆಲಸ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯ ಕಲ್ಯಾಣವನ್ನು ಮರೆತುಬಿಟ್ಟಿದೆ. ಕೇಂದ್ರದ ಮಾತನ್ನು ಕೇಳುವ ಸರ್ಕಾರ ಒಂದು ರಾಜ್ಯದಲ್ಲಿದ್ದರೆ ಆ ರಾಜ್ಯ ಅಭಿವೃದ್ಧಿಯಾಗುತ್ತದೆ. ನಮಗೆ ಅಸ್ಸಾಂ ನಲ್ಲಿ ಒಂದು ಅವಕಾಶ ಕೊಟ್ಟು ನೋಡಿ ಎಂದು ಹೇಳಿದ್ದಾರೆ.