

ನವದೆಹಲಿ: ಜೆಎನ್ ಯು ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ಬುಧವಾರ ನಡೆಯುತ್ತಿದ್ದ ವಿಚಾರಣೆ ವೇಳೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ವಕೀಲರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಜೆಎನ್ ಯು ಪ್ರಕರಣ ಸಂಬಂಧ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಇಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲ ವಕೀಲರು ಏಕಾಏಕಿ ಕನ್ಹಯ್ಯ ಕುಮಾರ್ ಅವರನ್ನು ಥಳಿಸಿದ್ದಾರೆ. ಕನ್ಹಯ್ಯ ಕುಮಾರ್ ಅವರು ಕೋರ್ಟ್ ಹಾಲ್ ಅನ್ನು ಪ್ರವೇಶ ಮಾಡುತ್ತಿದ್ದಂತೆಯೇ ಪೊಲೀಸ್ ಭದ್ರತೆಯನ್ನು ಭೇದಿಸಿಕೊಂಡು ಬಂದ ವಕೀಲರು ಕನ್ಹಯ್ಯ ಕುಮಾರ್ ಮೇಲೆ ಮುಗಿಬಿದಿದ್ದು, ಭಾರಿ ಭದ್ರತೆಯ ನಡುವೆಯೂ ವಕೀಲರ ಈ ದಾಳಿ ಪೊಲೀಸ್ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.
ಇನ್ನು ವಕೀಲರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಘಟನೆಯ ಕುರಿತಂತೆ ವರದಿ ನೀಡಲು 5 ಮಂದಿ ಹಿರಿಯ ವಕೀಲರನ್ನು ನೇಮಿಸಿದೆ.
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಘರ್ಷಣೆ ಪ್ರಕರಣ ಸಂಬಂಧ ಬಂಧಿತರಾಗಿರುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಕೊನೆಗೊಂಡಿದ್ದು, ಇಂದು ಅವರನ್ನು ಭಾರಿ ಪೊಲೀಸ್ ಭದ್ರತೆಯ ನಡುವೆ ದೆಹಲಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು.