

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲದಲ್ಲಿ ಶಾಂತಿಭಂಗಕ್ಕೆ ಕಾರಣವಾಗಿದ್ದ ಉಗ್ರ ಅಫ್ಜಲ್ ಗುರು ಪರ ಕಾರ್ಯಕ್ರಮದಂತೆಯೇ ದೇಶದ ವಿವಿಧ 18 ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮ ನಡೆಸಲು ಉಮರ್ ಖಲೀದ್ ಯೋಜನೆ ರೂಪಿಸಿದ್ದ ಎಂದು ಹೇಳಲಾಗುತ್ತಿದೆ.
ಜೆಎನ್ ಯು ಪ್ರಕರಣ ಸಂಬಂಧ ದೆಹಲಿ ಪೊಲೀಸರಿಗೆ ಬೇಕಿರುವ ಉಮರ್ ಖಲೀದ್ ತನ್ನ ಪಟಾಲಂ ಅನ್ನು ಬಳಕೆ ಮಾಡಿಕೊಂಡು ಜೆಎನ್ ಯು ವಿವಿ ಮಾದರಿಯಲ್ಲಿಯೇ ದೇಶದ 18 ವಿವಿಗಳಲ್ಲಿ ಶಾಂತಿಕದಡುವ ಕಾರ್ಯಕ್ರಮಗಳನ್ನು ಯೋಜಿಸಿದ್ದ ಎಂದು ವರದಿಗಳು ಹೇಳಿವೆ. ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ ಉಮರ್ ಖಲೀದ್ ಡೆಮಾಕ್ರಟಿಕ್ ಯೂನಿಯನ್ ಸದಸ್ಯನಾಗಿದ್ದು, ಜೆಎನ್ ಯು ನಲ್ಲಿ ನಡೆದ ಅಫ್ಜಲ್ ಗುರು ಪರ ಕಾರ್ಯಕ್ರಮದ ಪ್ರಮುಖ ಆಯೋಜಕನಾಗಿದ್ದ ಎಂದು ತಿಳಿದುಬಂದಿದೆ.
ಇದೇ ವೇಳೆ ಈತ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಅಲಹಾಬಾದ್ ವಿವಿ ಸೇರಿದಂತೆ ದೇಶದ ವಿವಿಧ 18 ವಿಶ್ವವಿದ್ಯಾಲಯಗಳಿಗೆ ಕೆಲ ವ್ಯಕ್ತಿಗಳನ್ನು ಕಳುಹಿಸಿ, ಉಗ್ರ ಅಫ್ಜಲ್ ಗುರು ಪರ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚನೆ ನೀಡಿದ್ದ ಮತ್ತು ಖಲೀದ್ ನಿಂದ ಸೂಚನೆ ಪಡೆದಿದ್ದ ವ್ಯಕ್ತಿಗಳು ವಿವಿಧ ವಿವಿಗಳಿಗೆ ಭೇಟಿ ನೀಡಿ ಅಲ್ಲಿ ಪ್ರತ್ಯೇಕತಾ ಮನಸ್ಥಿತಿ ಇರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ಕಾರ್ಯಕ್ರಮ ಆಯೋಜನೆ ಸಂಬಂಧ ಯೋಜನೆ ಕೂಡ ರೂಪಿಸಿದ್ದರು ಎಂದು ಭದ್ರತಾ ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಜೆಎನ್ ಯು ಪ್ರಕರಣದಲ್ಲಿ ಸಂಬಂಧ ದೆಹಲಿ ಪೊಲೀಸರು ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ದಾಳಿ ಮಾಡಿದ್ದರು. ಮೂಲಗಳ ಪ್ರಕಾರ ಜೆಎನ್ ಯು ಘರ್ಷಣೆ ನಡೆಯುವ 2 ದಿನಗಳ ಮುಂಚಿತವಾಗಿ ಅಂದರೆ ಫೆಬ್ರವರಿ 7ರಂದು ಜಮ್ಮು ಮತ್ತು ಕಾಶ್ಮೀರದ 10 ಮಂದಿ ಜವಾಹರ್ ಲಾಲ್ ವಿಶ್ವವಿದ್ಯಾಲಯದ ಆವರಣವನ್ನು ಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ತನಿಖಾ ಸಂಸ್ಥೆಗಳು ಜೆಎನ್ ಯು ಪ್ರಕರಣದ ಹಿಂದೆ ಉಗ್ರಗಾಮಿ ಸಂಘಟನೆಗಳ ಅಥವಾ ಪ್ರತ್ಯೇಕತಾವಾದಿಗಳ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ದಿನಗಳೆದಂತೆ ಜೆಎನ್ ಯು ವಿವಾದ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.