

ಕೋಲ್ಕತಾ: ಗಣರಾಜ್ಯೋತ್ವ ದಿನಾಚರಣೆಯ ಸೈನಿಕರ ಪರೇಡ್ ಗಾಗಿ ತರಬೇತಿ ನಡುಸುತ್ತಿದ್ದ ವೇಳೆ ಭಾರತೀಯ ವಾಯು ಸೇನೆ ಅಧಿಕಾರಿಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ಕೋಲ್ಕತಾದಲ್ಲಿ ನಡೆದಿದೆ.
ಸೈನಿಕರ ತರಬೇತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ವಾಯುಸೇನೆಯ ಅಧಿಕಾರಿ ಅಭಿಮನ್ಯು ಗೌಡ್ (30 ವರ್ಷ) ಅವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಸುಮಾರು 6.30ರ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ಕೋಲ್ಕತಾದಲ್ಲಿ ಸೈನಿಕರ ಪರೇಡ್ ಮೇಲ್ವಿಚಾರಣೆ ಮಾಡುತ್ತಿದ್ದ ಅಭಿಮನ್ಯು ಅವರಿಗೆ ಖಾಸಗಿ ಕಾರೊಂದು ಗುದ್ದಿದೆ. ಗಂಭೀರವಾಗಿ ಗಾಯಗೊಂಡ ಅಭಿಮನ್ಯು ಅವರನ್ನು ಕೂಡಲೇ ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಕೋಲ್ಕತಾದ ಸೈನಿಕ ಪ್ರದೇಶದಲ್ಲಿ ಸೈನಿಕರು ಪರೇಡ್ ನಡೆಸುವಾಗ ಸಾರ್ವಜನಿಕ ಪ್ರವೇಶಕ್ಕೆ ಮತ್ತು ಖಾಸಗಿ ವಾಹನಗಳಿಗೆ ನಿರ್ಭಂಧ ಹೇರಿರಲಾಗಿರುತ್ತದೆ. ಆದರೆ ನಿರ್ಭಂಧವಿದ್ದರೂ ಖಾಸಗಿ ಆಡಿಕಾರು ವೇಗವಾಗಿ ನುಗ್ಗಿದ್ದು, ಅಧಿಕಾರಿಗೆ ಢಿಕ್ಕಿ ಹೊಡೆದಿದೆ. ಪ್ರಸ್ತುತ ಆಡಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.