

ನವದೆಹಲಿ: ಪಠಾಣ್ ಕೋಟ್ ದಾಳಿ ಪ್ರಕರಣವನ್ನು ಗಂಭೀರವಾಗ ಪರಿಗಣಿಸಿರುವ ಭಾರತ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಇಂಡೋ-ಪಾಕ್ ಗಡಿಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಮುಂದಾಗಿದೆ.
ಅತ್ಯುನ್ನತ ಮಟ್ಟದ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದ ಭಾರತಕ್ಕೆ ಇಸ್ರೇಲ್ ಮಾದರಿಯ ಬೇಲಿ ನಿರ್ಮಾಣ ವ್ಯವಸ್ಥೆ ಹೆಚ್ಚು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಪಟ್ಟ ಹಿನ್ನಲೆಯಲ್ಲಿ ಭಾರತದ ಗಡಿಗಳಲ್ಲಿ ಈ ಮಾದರಿಯ ಬೇಲಿಗಳನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಗಡಿಯಲ್ಲಿ ಉಗ್ರರು ನುಸುಳುವುದನ್ನು ತಡೆಯಲು ಇಸ್ರೇಲ್ ಮಾದರಿಯಲ್ಲಿಯೇ ಸುರಕ್ಷಿತ ಬೇಲಿ ನಿರ್ಮಾಣ ಮಾಡಲು ಭಾರತ ತೀರ್ಮಾನಿಸಿದ್ದು, ಅದರ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಉತ್ತಮ ಗುಣಮಟ್ಟದ ಕ್ಯಾಮೆರಾಗಳು, ರಾತ್ರಿ ಕಾಣುವಂತೆ ಅತ್ಯುನ್ನತ ತಂತ್ರಜ್ಞಾನದ ವ್ಯವಸ್ಥೆ, ಎಲೆಕ್ಟ್ರಾನಿಕ್ ಟಚ್ ಅಂಡ್ ಮಾನಿಟರ್ ಸೆನ್ಸಾರ್, ವಿಶೇಷ ರಡಾರ್ ಗಳು ಇತ್ಯಾದಿಗಳಿಂದ ಬೇಲಿಯ ಸುರಕ್ಷತೆಯನ್ನು ಬಿಗಿಗೊಳಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಪಾಕ್ ಮೂಲದ ಜೈಷ್ – ಎ – ಮೊಹ್ಮದ್ ಉಗ್ರರು ಗಡಿಯಲ್ಲಿಯೇ ಬಂದು ದಾಳಿ ನಡೆಸಿರುವ ಕುರಿತು ತನಿಖಾ ತಂಡಗಳು ವರದಿ ನೀಡಿರುವ ಹಿನ್ನೆಲೆಯಲ್ಲಿ ಗಡಿ ಸುರಕ್ಷತೆ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಈ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಸಂಬಂಧಿಸಿದ ಸಚಿವಾಲಯದ ಅಧಿಕಾರಿಗಳೊಂದಿಗೆ ಕೆಲವು ಸುತ್ತಿನ ಚರ್ಚೆ ನಡೆಸಿದ್ದಾರೆ.
ಇನ್ನು ಇದಕ್ಕೆ ಇಂಬು ನೀಡುವಂತೆ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪೂರಕ ಸಹಕಾರ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, `ಗಡಿ ಬೇಲಿಯ ತಂತ್ರಜ್ಞಾನ ಕುರಿತಂತೆ ಭಾರತದೊಂದಿಗೆ ಸಹಕರಿಸಲು ಇಸ್ರೇಲ್ ಸಿದ್ಧವಿದೆ’ ಎಂದಿದ್ದಾರೆ.