

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಗೆರಿಲ್ಲಾ ಪಡೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ರೂಪದ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ನಡೆದ ಗಲಭೆಯಲ್ಲಿ ಮತ್ತೆ ನಾಲ್ವರು ಮೃತರಾಗಿದ್ದಾರೆ. ಆ ಮೂಲಕ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗಿನಿಂದಲೇ ಶ್ರೀನಗರ, ಪುಲ್ವಾಮಾ, ಜಮ್ಮು, ಅನಂತನಾಗ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕೃತವಾಗಿ ನಿಷೇಧಾಜ್ಞೆ ಹೇರಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೂ ಪ್ರತಿಭಟನಾಕಾರರು ಪೊಲೀಸರು ಮತ್ತು ಸೈನಿಕರ ಮೇಲಿನ ದಾಳಿಗಳನ್ನು ನಿಲ್ಲಿಸುತ್ತಲೇ ಇಲ್ಲ. ಹೀಗಾಗಿ ಹಲವು ಪ್ರದೇಶಗಳಲ್ಲಿ ನಡೆದ ಘರ್ಷಣೆಯಲ್ಲಿ ಇಂದು ಒಂದೇ ದಿನ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಘರ್ಷಣೆಯಲ್ಲಿ 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಪೈಕಿ 96 ಭದ್ರತಾ ಪಡೆ ಯೋಧರಿಗೂ ಗಾಯಗಳಾಗಿವೆ ಎಂದುತಿಳಿದುಬಂದಿದೆ.
ಕರ್ಫ್ಯೂ ನಡುವೆಯೇ ಬೀದಿಗಿಳಿದಿರುವ ಪ್ರತಿಭಟನಾಕಾರರು ಭದ್ರತಾ ಪಡೆಗಳ ವಿರುದ್ಧ ಘರ್ಷಣೆಗೆ ಇಳಿದ ಪರಿಣಾಮ ಇಂದು ಬೆಳಗ್ಗೆ 18 ವರ್ಷದ ಇರ್ಫಾನ್ ಅಹ್ಮದ್ ಮಲ್ಲಿಕ್ ಎಂಬ ಯುವಕ ಸಾವನ್ನಪ್ಪಿದ್ದ. ಇದೀಗ ಮತ್ತೆ ಮೂವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಈ ಪೈಕಿ ಘರ್ಷಣೆಯಲ್ಲಿ ಕಾರ್ಯಾಚರಣೆ ನಿರತರಾಗಿದ್ದ ಮೂವರು ಪೊಲೀಸರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಶಂಕಿತ ಉಗ್ರರು ಅಥವಾ ಪ್ರತಿಭಟನಾ ನಿರತರು ಪೊಲೀಸರನ್ನು ಅಪಹರಿಸಿರುವ ಅಥವಾ ಕೊಂದು ಹಾಕಿರುವ ಶಂಕೆ ವ್ಯಕ್ತವಾಗುತ್ತಿದೆ.
ಶುಕ್ರವಾರ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿಯನ್ನು ಕೊಂದು ಹಾಕಲಾಗಿತ್ತು. 21 ವರ್ಷದ ಬುರ್ಹಾನ್ ಮುಜಾಫರ್ ವಾನಿ ಮತ್ತು ಆತನ ಇಬ್ಬರು ಸಹಚರರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಯೋಧರು ಹತ್ಯೆ ಮಾಡಿದ್ದರು. ಉಗ್ರ ಪಡೆಯ ನೂತನ ಉಗ್ರರಿಗೆ ಗೆರಿಲ್ಲಾ ಯುದ್ಧದ ಪಾಠ ಹೇಳಿಕೊಡುತ್ತಿದ್ದ ವಾನಿ, ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳವ ಮತ್ತು ಅವರನ್ನು ಪ್ರಚೋದಿಸುವ ಕಾರ್ಯ ಕೂಡ ಮಾಡುತ್ತಿದ್ದ. ಈತನ ಹತ್ಯೆ ಬಳಿಕ ಕಾಶ್ಮೀರ ಉದ್ವಿಗ್ನವಾಗಿತ್ತು. ಮೃತ ಉಗ್ರ ಬುರ್ಹಾನ್ ವಾನಿಯ ಅಂತ್ಯಸಂಸ್ಕಾರ ಮುಗಿದ ಮೇಲೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಹಾಗೂ ಬಿಜೆಪಿ ಕಚೇರಿಗಳ ಮೇಲೆ ದಾಳಿ ಮಾಡಿತ್ತು.