

ಅಹ್ಮದಾಬಾದ್: ಮೂವರನ್ನು ಕೊಂದ ಆರೋಪದ ಮೇಲೆ ಗುಜರಾತ್ ಪೊಲೀಸರು 18 ಗಂಡು ಸಿಂಹಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ವಿಲಕ್ಷಣ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಮೂವರು ಮಾನವರನ್ನು ಕೊಂದ ಆರೋಪದ ಮೇರೆಗೆ ಗುಜರಾತ್ ಪೊಲೀಸರು ಒಟ್ಟು 18 ಗಂಡು ಸಿಂಹಗಳನ್ನು ಬಂಧಿಸಿದ್ದು, ಹತ್ಯೆಗೆ ಕಾರಣವಾದ ಸಿಂಹ ಯಾವುದೆಂದು ಪತ್ತೆ ಹಚ್ಚಲು ಸಿಂಹಗಳ ಹೆಜ್ಜೆ ಗುರುತನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ 18 ಸಿಂಹಗಳ ಪೈಕಿ ಮೂವರನ್ನು ಕೊಂದ ಸಿಂಹ ಪತ್ತೆಯಾದರೆ ಅದಕ್ಕೆ ಜೀವಾವವಧಿ ಶಿಕ್ಷೆ ನೀಡಲು ನಿರ್ಧರಿಸಲಾಗಿದ್ದು, ಅಂದರೆ ಮೃಗಾಲಯದಲ್ಲಿ ಸಿಂಹವನ್ನು ಬಂಧಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಗುಜರಾತ್ನ ಹಿರಿಯ ಅರಣ್ಯ ಅಧಿಕಾರಿ ಜೆ.ಎ.ಖಾನ್ ಅವರು, ಮಾನವರ ಕೊಂದ ಸಿಂಹ ಪತ್ತೆಯಾದ ಬಳಿಕ ಉಳಿದ ಸಿಂಹಗಳನ್ನು ಕಾಡಿಗೆ ಬಿಡಲಾಗುತ್ತದೆ. ಹೆಜ್ಜೆ ಗುರುತಿನ ವರದಿಗಾಗಿ ಕಾಯುತ್ತಿದ್ದೇವೆ. ಇನ್ನೂ 9 ಸಿಂಹಗಳ ಹೆಜ್ಜೆ ಗುರುತಿನ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನರಹತ್ಯೆ ಮಾಡಿರುವ ಸಿಂಹವನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದು, ಸಿಂಹಗಳ ವರ್ತನೆಯಲ್ಲಾಗಿರುವ ಬದಲಾವಣೆಗಳನ್ನೂ ಸಹ ಅವರು ಅಧ್ಯಯನ ಮಾಡುತ್ತಿದ್ದಾರೆ ಎಂದು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.
ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸಿಂಹಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಸುಮಾರು 400 ಏಷ್ಯಾ ಸಿಂಹಗಳು ಕಾಡಿನಲ್ಲಿ ವಾಸಿಸುತ್ತಿವೆ. ಆದರೆ ಈ ಪ್ರದೇಶದಲ್ಲಿ ಕೇವಲ 270 ಸಿಂಹಗಳು ವಾಸಿಸಲು ಸಾಧ್ಯವಿದೆ. ಹಾಗಾಗಿ ಕಾಡಿನ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಮನುಷ್ಯ ಮತ್ತು ಸಿಂಹಗಳ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಿರುತ್ತದೆ. ಈ ಘರ್ಷಣೆಯಲ್ಲಿ ಮನುಷ್ಯರು ಮತ್ತು ಸಿಂಹಗಳು ಪ್ರಾಣ ಕಳೆದುಕೊಳ್ಳುತ್ತಿರುತ್ತವೆ.