

ಬೀಜಿಂಗ್: ಪಾಕಿಸ್ತಾನದ ಪರಮಾಣು ದಾಖಲೆಯನ್ನು ಸಮರ್ಥಿಸಿಕೊಂಡಿರುವ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು, ಎನ್ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ್ದು, ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಭಾರತಕ್ಕೆ ನೀಡಲಾಗುವ ವಿನಾಯ್ತಿಯನ್ನು ಪಾಕಿಸ್ತಾನಕ್ಕೂ ನೀಡಬೇಕೆಂದು ಪಟ್ಟು ಹಿಡಿದಿವೆ.
ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಶತ ಪ್ರಯತ್ನ ನಡೆಸುತ್ತಿದ್ದು, ಅಣು ಪ್ರಸರಣ ತಡೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಕಳಪೆ ಹಿನ್ನೆಲೆಯಲ್ಲಿ ಪ್ರಮುಖ ವಿಷಯವನ್ನಾಗಿಸುವುದರ ಮೂಲಕ ಪಾಕ್ ನ ಸದಸ್ಯತ್ವಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ಚೀನಾ ಮಾಧ್ಯಮಗಳು ಆರೋಪಿಸಿವೆ. ಪಾಕಿಸ್ತಾನದ ಅಣು ಪ್ರಸರಣಕ್ಕೆ ಕಾರಣವಾಗಿದ್ದು ಪಾಕಿಸ್ತಾನದ ಅಬ್ದುಲ್ ಖಾದಿರ್ ಖಾನ್ ಹೊರತು ಅದು ಪಾಕಿಸ್ತಾನದ ಸರ್ಕಾರಿ ನೀತಿಯಾಗಿರಲಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಮಾಧ್ಯಮ ಹೇಳಿದೆ.
ಸರ್ಕಾರದ ನೀತಿಯನ್ನು ಉಲ್ಲಂಘಿಸಿ ಅಣು ಪ್ರಸರಣ ಮಾಡಿದ್ದಕ್ಕಾಗಿ ಅಬ್ದುಲ್ ಖಾದಿರ್ ಖಾನ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಒಂದು ವೇಳೆ ಎನ್ ಪಿಟಿ ಹಾಗೂ ಎನ್ ಎಸ್ ಜಿ ಭಾರತಕ್ಕೆ ವಿನಾಯ್ತಿ ನೀಡುವುದು ಸಾಧ್ಯವಾದರೆ ಆ ಯ್ತಿ ಪಾಕಿಸ್ತಾನಕ್ಕೂ ನೀಡಬಹುದು ಎಂದು ಗ್ಲೋಬಲ್ ಟೈಮ್ಸ್ ವರದಿ ಪ್ರಕಟ ಮಾಡಿದೆ. ಇದೇ ಮೊದಲ ಬಾರಿಗೆ ಚೀನಾದ ಸರ್ಕಾರಿ ಮಾಧ್ಯಮವೊಂದು ಪಾಕಿಸ್ತಾನ ಎನ್ ಎಸ್ ಜಿ ಸಮೂಹಕ್ಕೆ ಸೇರ್ಪಡೆಯನ್ನು ಬಹಿರಂಗವಾಗಿ ಬೆಂಬಲಿಸಿದೆ. ಭಾರತವನ್ನು ಎನ್ ಎಸ್ ಜಿ ಸಮೂಹಕ್ಕೆ ಸೇರ್ಪಡೆಗೊಳಿಸಿ ಪಾಕಿಸ್ತಾನವನ್ನು ಬಿಡುವುದರಿಂದ, ಭಾರತದ ಸಮಸ್ಯೆಯನ್ನು ಪರಿಹರಿಸಿ, ಮತ್ತೊಂದು ಸಮಸ್ಯೆಯನ್ನು ಸೃಷ್ಟಿಮಾಡಿದಂತಾಗುತ್ತದೆ. ಭಾರತ ಪಾಕಿಸ್ತಾನದ ಸದಸ್ಯತ್ವಕ್ಕೂ ಬೆಂಬಲ ನೀಡಿದರೆ ಅದು ಉತ್ತಮ ಬೆಳವಣಿಗೆ ಎಂದು ಚೀನಾ ಮಾಧ್ಯಮ ಅಭಿಪ್ರಾಯಪಟ್ಟಿದೆ.