

ನವದೆಹಲಿ: ಶನಿವಾರ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಉಗ್ರ ದಾಳಿ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದು, ಯೋಧರ ತ್ಯಾಗ ಮತ್ತು ಬಲಿದಾನಕ್ಕಾಗಿ ಕಂಬನಿ ಮಿಡಿದ್ದಾರೆ.
ಉಗ್ರ ದಾಳಿ ಪ್ರಕರಣ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರ ದಾಳಿಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಭಾರತೀಯ ಯೋಧರ ಧೈರ್ಯ ಮತ್ತು ತ್ಯಾಗಬಲಿದಾನವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಹುತಾತ್ಮ ಯೋಧರಿಗಾಗಿ ಕಂಬನಿ ಮಿಡಿದ್ದಾರೆ. "ಸಿಆರ್ ಪಿಎಫ್ ಯೋಧರ ಧೈರ್ಯ ಮತ್ತು ತ್ಯಾಗ-ಬಲಿದಾನಕ್ಕಾಗಿ ನಾನು ಸಲ್ಯೂಟ್ ಮಾಡುತ್ತೇನೆ. ಅತ್ಯಂತ ಸಮರ್ಪಣಾ ಮನೋಭಾವದಿಂದ ಯೋಧರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವು ಅತೀವ ನೋವುತಂದಿದೆ. ಹುತಾತ್ಮ ಯೋಧರ ಕುಟುಂಬದೊಂದಿಗೆ ಇಡೀ ದೇಶವಿದ್ದು, ಗಾಯಗೊಂಡ ಯೋಧರು ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಿನ್ನೆ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ತರಬೇತಿ ಮುಗಿಸಿ ಕ್ಯಾಂಪ್ ಗೆ ಅಗಮಿಸುತ್ತಿದ್ದ, ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ನಡೆದ ಉಗ್ರದಾಳಿ ಪ್ರಕರಣದಲ್ಲಿ 8 ಮಂದಿ ಯೋಧರು ಸಾವನ್ನಪ್ಪಿದ್ದರು. ಅಲ್ಲದೆ 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.