

ನವೆದೆಹಲಿ: ಇಶ್ರಾತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿ ವಿವಾದಕ್ಕೆ ಸಿಲುಕಿರುವ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಗುಜರಾತ್ ನ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಇಶ್ರಾತ್ ಜಹಾನ್ ಪ್ರಕರಣ ಇಂದು ಲೋಕಸಭೆಯಲ್ಲಿ ಗದ್ದಲದ ವಾತಾವರಣ ಮೂಡಿಸಿದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಕಲಾಪ ಮತ್ತೆ ಆರಂಭವಾದಾಗ ಮಾತನಾದ ಸೋನಿಯಾ ಅವರು ಚಿದಂಬರಂ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಇಶ್ರಾತ್ ಪ್ರಕರಣದಲ್ಲಿ ಚಿದಂಬರಂ ಅವರು ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ಮಾತನಾಡಿ, ಸರ್ಕಾರ ಚಿದಂಬರಂ ಅವರ ವಿಚಾರ ಕುರಿತಂತೆ ಚರ್ಚೆ ನಡೆಸಲು ಸಿದ್ಧವಿದೆ. ಪ್ರತಿಭಟನೆ ನಡೆಸುತ್ತಿರುವ ಎಐಎಡಿಎಂಕೆಯವರು ನೋಟಿಸ್ ಜಾರಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ನಿತಿನ್ ಗಡ್ಕರಿ ಮಾತನಾಡಿ, ಯುಪಿಎ ಆಡಳಿತಾವಧಿಯಲ್ಲಿ ಇಶ್ರಾತ್ ಪ್ರಕರಣ ಸಂಬಂಧ ನಡೆದ ಎಲ್ಲಾ ಸತ್ಯಾಸತ್ಯತೆಗಳು ಹೊರಬರುತ್ತಿವೆ. ಪ್ರಕರಣದಲ್ಲಿ ಅಂದು ಯುಪಿಎ ಸರ್ಕಾರದಲ್ಲಿ ನಡೆದಿರುವುದು ದೇಶ ವಿರೋಧವಾದದ್ದು ಎಂದು ಹೇಳಿದ್ದಾರೆ.
ಶತ್ರುಜ್ಞ ಸಿನ್ಹಾ ಮಾತನಾಡಿ, ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರ ಮೇಲೆ ಹಲವು ಸಂಶಯಗಳು ಮೂಡುತ್ತಿದ್ದು, ಅವರನ್ನು ಮತ್ತೆ ತನಿಖೆಗೊಳಪಡಿಸಬೇಕು ಎಂದು ಹೇಳಿದ್ದಾರೆ.
ವೆಂಕಯ್ಯ ಮಾತನಾಡಿ, ಪ್ರಕರಣ ಸಂಬಂಧ ಚಿದಂಬರಂ ಹಾಗೂ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸ್ಪಷ್ಟನೆ ನೀಡಬೇಕಿದ್ದು, ಯಾವ ಕಾರಣಕ್ಕೆ ಅಫಿಡವಿಟ್ ತಿದ್ದುಪಡಿ ಮಾಡಿದ್ದರೆಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಇಶ್ರಾತ್ ಜಾಹ್ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ್ದ ಗೃಹ ಇಲಾಖೆಯ ಮಾಜಿ ಅಧೀನ ಕಾರ್ಯದರ್ಶಿ ಆರ್ ವಿ ಎಸ್ ಮಣಿ ಅವರು, ಅಂದಿನ ಗುಜರಾತ್ ಮುಖ್ಯಮಂತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ಇಶ್ರಾತ್ ಜಹಾನ್ ಗೆ ಸಂಬಂಧಿಸಿದ ಅಫಿಡಿವಿಟ್ ನ್ನು ತಿದ್ದುಪಡಿ ಮಾಡಲಾಗಿತ್ತು. ತಿದ್ದುಪಡಿ ಮಾಡುವುದಕ್ಕೆ ಅಂದಿನ ಗೃಹ ಸಚಿವ ಪಿ ಚಿದಂಬರಂ ಅವರೇ ನಿರ್ದೇಶಿಸಿದ್ದರು ಎಂದು ಹೇಳಿದ್ದರು.
ಇಶ್ರಾತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿ 2009 ನೆ ಆಗಸ್ಟ್ ನಲ್ಲಿ ನಿರ್ದೇಶಕರೊಂದಿಗೆ ಸೇರಿ ಅಧೀನಕಾರ್ಯದರ್ಶಿ ಆರ್ ವಿ ಎಸ್ ಮಣಿ ಸಿದ್ಧಪಡಿಸಿದ್ದ ಮೊದಲನೇ ಅಫಿಡವಿಟ್ ನಲ್ಲಿ ಇಶ್ರಾತ್ ಜಹಾನ್ ಉಗ್ರಳು ಹಾಗೂ ಆಕೆಯೊಂದಿಗೆ ಹತ್ಯೆಗೀಡಾದ ಮೂವರು ಎಲ್ ಇ ಟಿ ಉಗ್ರರು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಸ್ಪಷ್ಟನೆ ನಂತವೂ ಅಫಿಡಿವಿಟ್ ತಿದ್ದುಪಡಿ ಮಾಡಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದೀಗ ಚಿದಂಬರಂ ಅವರ ಮೇಲೆ ಹಲವು ಸಂಶಯಗಳು ಮೂಡುವಂತೆ ಮಾಡಿದೆ.
ಈ ಹಿಂದೆ ಜಿ.ಕೆ. ಪಿಳ್ಳೈ ಅವರು ಇಶ್ರಾತ್ ಜಹಾನ್ ಪ್ರಕರಣ ಸಂಬಂಧ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿ, ಇಶ್ರಾತ್ ಜಹಾನ್ ಎಲ್ ಇಟಿ ಉಗ್ರ ಸಂಘಟನೆಗೆ ಸೇರಿದ್ದಳೆಂದು ತಿಳಿದುಬಂದಿದ್ದರೂ ಕೂಡ ಇಶ್ರಾತ್ ವಿರುದ್ಧದ ಆರೋಪಗಳಲ್ಲಿ ಯಾವುದೇ ನಂಬಲರ್ಹ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಅಂದಿನ ಗೃಹ ಸಚಿವಾಲಯದ ಅಫಿಡಿವಿಟ್ ನ್ನು ತಿದ್ದುಪಡಿ ಮಾಡಲಾಗಿತ್ತು. 200ರಲ್ಲಿ ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಸಲಿಸಿದ್ದ ಅವಧಿಯಲ್ಲಿ ಪಿಳ್ಳೈ ಅವರು ಗೃಹ ಕಾರ್ಯದರ್ಶಿಗಳಾಗಿದ್ದರು. ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಗೃಹ ಸಚಿವರಾಗಿದ್ದರು. ಅಂದು ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ರಾಜೇಂದ್ರ ಕುಮಾರ್ ಅವರು, ಪ್ರಕರಣದ ಸತ್ಯವನ್ನು ತಿರುಚಲು ಕಾಂಗ್ರೆಸ್ ರಾಜಕಾರಣಿಗಳು ಹಾಗೂ ಸಿಬಿಐ ಅಧಿಕಾರಿಯೊಬ್ಬರನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದರು.