

ನವದೆಹಲಿ: ಸದ್ಯ ವಿವಾದದ ಕೇಂದ್ರ ಬಿಂಧುವಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕಾಲರ್ ವಿದ್ಯಾರ್ಥಿಯೊಬ್ಬ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಕ್ಷಿಣ ದೆಹಲಿಯ ಬೇರ್ ಸರೈನ ಖಾಸಗಿ ಪೇಯಿಂಗ್ ಗೆಸ್ಟ್ ಗಾರ್ಡಿಯಾನ್ ಹಾಸ್ಟೆಲ್ ರೂಂ ನಂಬರ್ 602ರಲ್ಲಿ ತಂಗಿದ್ದ ಜೆಎನ್ ಯು ವಿದ್ಯಾರ್ಥಿ 28 ವರ್ಷದ ದುಶ್ಯಾಂತ್ ದಿಕ್ಷಿತ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದುಶ್ಯಾಂತ್ ದೀಕ್ಷಿತ್ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ದಾನೆಟ ಗ್ರಾಮದವನಾಗಿದ್ದು, ಕೌಟುಂಬಿಕ ಸಮಸ್ಯೆ ಗೊಂದಲಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಪೇಯಿಂಗ್ ಗೆಸ್ಟ್ ಆಗಿ ತಂಗಿದ್ದ ದುಶ್ಯಾಂತ್ ದೀಕ್ಷಿತ್ ರೂಂನಲ್ಲಿ ಒಬ್ಬನೆ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ದುಶ್ಯಾಂತ್ ದೀಕ್ಷಿತ್ ಸ್ನೇಹಿತನೊಬ್ಬ ರೂಂ ಬಾಗಿಲು ಬಡಿದಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಬರದಿದ್ದರಿಂದ ಕಿಟಕಿಯಿಂದ ಒಳಗೆ ನೋಡಿದಾಗ ದುಶ್ಯಾಂತ್ ನೇಣು ಬಿಗಿದುಕೊಂಡಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.