

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದಾರೆಂಬ ವರದಿಗಳಿಗೆ ಸಂಬಂಧಿಸಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಸಂಬಂಧ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಭಾರತವನ್ನು ಬಿಟ್ಟು ಓಡಿಹೋಗಿಲ್ಲ. ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದು, ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುತ್ತಿರುತ್ತೇನೆ. ನಾನೊಬ್ಬ ಸಂಸದನಾಗಿದ್ದು, ಭಾರತ ದೇಶದ ಕಾನೂನಿ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, ಟಿಆರ್ ಪಿ ಗಾಗಿ ಮಾಧ್ಯಮಗಳು ಇಂತಹ ಸುಳ್ಳು ಸುದ್ದಿ ಬಿತ್ತರಿಸುವುದ ಸರಿಯಲ್ಲ. ಮಾಧ್ಯಮಗಳ ಅಧಿಕಾರಿಗಳು ವರ್ಷಾನುಗಟ್ಟಲೆ ನಾನು ಮಾಡಿದ ಸಹಾಯವನ್ನು ಮರೆಯಬೇಡಿ. ಮಾಧ್ಯಮಗಳಿಗೆ ನಾನು ತೋರಿದ ದಯೆ ಹಾಗೂ ನೀಡಿದ ಸೌಕರ್ಯಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಟಿಆರ್ ಪಿಗಾಗಿ ಸುಳ್ಳು ಸುದ್ದಿಯನ್ನು ಬಿತ್ತರಿಸಬೇಡಿ ಎಂದು ಹೇಳಿದ್ದಾರೆ.