

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರವಾಗಿ ಸಂಸತ್ತಿನಲ್ಲಿ ಮಾತನಾಡಿರುವ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಸೋಮವಾರ ಆಗ್ರಹಿಸಿದ್ದಾರೆ.
ಈ ಕುರಿತಂತೆ ಇಂದು ನಡೆದ ಕಲಾಪದಲ್ಲಿ ಮಾತನಾಡಿರುವ ರಾಹುಲ್ ಅವರು, ದೇಶದ ಹಲವು ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗಿ ಬೆಳೆಗಳು ಹಾನಿಯಾಗಿವೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಕೃಷಿ ಸಚಿವರು ಬೆಳೆಹಾನಿ ಕುರಿತು ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.
ಇದರಂತೆ ರಾಹುಲ್ ಗಾಂಧಿಯವರ ಆಗ್ರಹಕ್ಕೆ ಉತ್ತರ ನೀಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಬೆಳೆಹಾನಿ ಹಾಗೂ ಅಕಾಲಿಕ ಮಳೆ ಕುರಿತಂತೆ ವಿವಿಧ ರಾಜ್ಯಗಳಿಂದ ವರದಿಗಳನ್ನು ತರಿಸಲಾಗುತ್ತಿದೆ. ಹಾನಿಯ ಸಂಪೂರ್ಣ ಮಾಹಿತಿ ದೊರೆತ ಕೂಡಲೇ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಕೃಷಿ ಸಚಿವರ ಈ ಕುರಿತು ಸಂಸತ್ ಗೆ ಮಾಹಿತಿ ನೀಡುತ್ತಾರೆಂದು ಹೇಳಿದರು.