

ಅಸ್ಸಾಂ: ಕಾಂಗ್ರೆಸ್ ಉಪಾಧ್ಯಕ್ಷ ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದು, ಮೋದಿಯವರು ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆಂದು ಮಂಗಳವಾರ ಹೇಳಿದ್ದಾರೆ.
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ದಿಫುನಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಹೇಳಿದ್ದರು. ಆದರೆ, ಈ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.
ಮೋದಿಯವರು ಬರುತ್ತಾರೆ, ಭರವಸೆ ನೀಡುತ್ತಾರೆ ಮತ್ತೆ ಹೋಗುತ್ತಾರೆ, ಅಧಿಕಾರಕ್ಕೆ ಬಂದಾಗ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ರು.15 ಲಕ್ಷ ನೀಡುತ್ತೇನೆಂದು ಹೇಳಿದ್ದರು. ಆದರೆ, ಈ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ.
ಇನ್ನು ಮದ್ಯದೊರೆ ವಿಜಯ್ ಮಲ್ಯ, ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಅವರನ್ನು ಸುಲಭವಾಗಿ ದೇಶ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ವಿಜಯ್ ಮಲ್ಯ ವಿದೇಶಕ್ಕೆ ಹಾರುವುದಕ್ಕೂ ಮುನ್ನ ಸಚಿವರೊಬ್ಬರನ್ನು ಸಂಸತ್ತಿನಲ್ಲಿ ಭೇಟಿಯಾಗಿದ್ದರು. ಆದರೂ ಆಡಳಿರೂಢ ಸರ್ಕಾರ ಮಾತ್ರ ವಿದೇಶಕ್ಕೆ ಹಾರಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ.
ಅಸ್ಸಾಂ ರಾಜ್ಯಕ್ಕೆ ನಮ್ಮ ಸರ್ಕಾರ ವಿಶೇಷ ಸ್ಥಾನಮಾನವನ್ನು ನೀಡಿತ್ತು. ವಿಶೇಷ ಸ್ಥಾನಮಾನದಲ್ಲಿ ಅಸ್ಸಾಂ ರಾಜ್ಯಕ್ಕೆ ಸಾವಿರ ಕೋಟಿ ಹಣ ತಲುಪುತ್ತಿದ್ದು, ಅದನ್ನು ಮೋದಿಯವರು ಹಿಂಪಡೆದುಕೊಂಡರು. ಎಲ್ಲೆಲ್ಲಿ ಕಮಲ ಅರಳುತ್ತದೆಯೋ ಅಲ್ಲಿ ಜನರಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ ಬಿಜೆಪಿ ತನ್ನಲ್ಲಿರುವ ಒಂದು ಸಿದ್ಧಾಂತವನ್ನು ಎಲ್ಲಾ ಜನತೆಯ ಮೇಲೆ ಹೇರಲು ಯತ್ನಿಸುತ್ತಿದೆ. ಆದರೆ, ಈ ಒಂದು ಸಿದ್ಧಾಂತ ಭಾರತದ ಜನತೆಯ ಮೇಲೆ ಹೇರಲು ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾ ರಾಜ್ಯದ ಆಡಳಿತವನ್ನು ನಾಗ್ಪುರದಿಂದ ನಡೆಸಲಾಗುತ್ತದೆ. ಅಸ್ಸಾಂ ರಾಜ್ಯದ ಆಡಳಿತವನ್ನು ಪ್ರಧಾನಮಂತ್ರಿ ಕಚೇರಿಯಿಂದ ನಡೆಸಲಾಗುತ್ತದೆ. ಆದರೆ ನಾವು ಅಸ್ಸಾಂ ರಾಜ್ಯದ ಆಡಳಿತವನ್ನು ಅಸ್ಸಾಂನಲ್ಲೇ ನಡೆಸುತ್ತೇವೆಂದು ಹೇಳಿದ್ದಾರೆ.