

ದಿಗ್ಬಾಯ್ (ಅಸ್ಸಾಂ): ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂ ತಿನ್ಸುಕ್ಯಾ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಬಿಜೆಪಿ ಎಲ್ಲಿ ಹೋಗುತ್ತದೆಯೋ ಅಲ್ಲೆಲ್ಲಾ ಜನರ ಮಧ್ಯೆ ಹಿಂಸೆಯನ್ನು ಪ್ರಚೋದಿಸುತ್ತದೆ. ಅಸ್ಸಾಂನಲ್ಲಿ ಇಂತಹ ಹಿಂಸಾಚಾರಗಳು ಸಂಭವಿಸಿದರೆ ಅಭಿವೃದ್ಧಿ ಆಗುವುದಾದರು ಹೇಗೆ ಎಂದಿದ್ದಾರೆ.
ನಮ್ಮ ಪ್ರಧಾನಿಯವರು ಎಲ್ಲಿಯೇ ಹೋದರೂ ಅಲ್ಲಿ ವಿಕಾಸದ ಬಗ್ಗೆ ಮಾತನಾಡುತ್ತಾರೆ, ಆದರೆ, ಯಾವುದೇ ರಾಜ್ಯದಲ್ಲಿ ಬಿಜೆಪಿ ಗೆದ್ದರೂ ಆ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರ ಭ್ರಷ್ಟಾಚಾರ ಹೋರಾಟದ ಉದ್ದೇಶದ ಕುರಿತಂತೆ ಪ್ರಶ್ನೆ ಮಾಡಿರುವ ರಾಹುಲ್, ಪ್ರಧಾನಿಯವರು ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಆದರೆ, ಫೇರ್ ಆ್ಯಂಡ್ ಲವ್ಲಿ ಯೋಜನೆಯನ್ನೇಕೆ ತಂದರು?
ಮೋದಿಯವರು ಅಸ್ಸಾಂಗೆ ಭೇಟಿ ನೀಡಿದಾಗಲೆಲ್ಲಾ ಕಪ್ಪು ಹಣದ ಬಗ್ಗೆ, ಮಲ್ಯ, ಲಲಿತ್ ಮೋದಿ ಬಗ್ಗೆ ಒಂದು ಪದವನ್ನು ಮಾತನಾಡುವುದಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದರೆ ನಮ್ಮ ಸರ್ಕಾರ ಇಲ್ಲಿನ ಜನತೆಗೆ ರು.2 ರಂತೆ ಕೆಜಿ ಅಕ್ಕಿಯನ್ನು ನೀಡಲಿದೆ ಹಾಗೂ ನಾಗರಿಕ ಸೇವಾ ಪರೀಕ್ಷೆ ತಯಾರಿಗಾಗಿ ಪ್ರತಿ ಜಿಲ್ಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದಲ್ಲಿ ವಿದ್ಯಾರ್ಥಿವೇತನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.