

ನವದೆಹಲಿ: ತೀವ್ರ ಎದೆನೋವಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುಣಮುಖರಾಗಿ ಭಾನುವಾರ ಮನೆಗೆ ಮರಳಿದ್ದಾರೆ.
ಸತತ ಮೂರು ವಾರಗಳ ಹಿಂದೆ ಸುಷ್ಮಾ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನುರಿತ ವೈದ್ಯರ ತಂಡವೊಂದು ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿತ್ತು. ಇಂದು ವೈದ್ಯರು ಸುಷ್ಮಾ ಅವರನ್ನು ಪರೀಕ್ಷಿಸಿ ಸಂಪೂರ್ಣವಾಗಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಸಿ. ಮಿಶ್ರಾ ಅವರು, ನ್ಯೂಮೋನಿಯಾಕ್ಕಾಗಿ ಸುಷ್ಮಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಈಗ ಆರೋಗ್ಯವಾಗಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. 64 ವರ್ಷದ ಸುಷ್ಮಾ ಸ್ವರಾಜ್‌ರನ್ನು ಏಪ್ರಿಲ್ 25 ರಂದು ಎದೆ ನೋವಿನಿಂದಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.