

ನವದೆಹಲಿ: ರು.500 ಹಾಗೂ 1,000 ನೋಟಿನ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ನ್ಯಾಯಯುತವಾಗಿ ಹಣವನ್ನು ಇಟ್ಟುಕೊಂಡಿರುವವರು ಹೆದರುವ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಹೇಳಿದ್ದಾರೆ.
ರು.500 ಹಾಗೂ 1,000 ನೋಟಿನ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಪ್ಪು ಹಣ ಹೊಂದಿರುವವರಿಗೆ ತಲೆನೋವು ಎದುರಾಗಿದೆ. ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ಹೋರಾಟ ಮಾಡಲು ನಿರ್ಧರಿಸಿತ್ತು. ಇದರಂತೆ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಮನೆಯಲ್ಲಿ ಹಣವನ್ನು ಇಟ್ಟುಕೊಂಡಿರುವವರು ಚಿಂತೆಗೀಡಾಗುವ ಅಗತ್ಯವಲ್ಲ. ಹಣ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ಕಾಲಾವಕಾಶವನ್ನು ನೀಡಿದೆ. ಸಾರ್ವಜನಿಕರು ಸ್ಥಳೀಯ ಬ್ಯಾಂಕು ಅಥವಾ ಅಂಚೆ ಕಚೇರಿಗಳಿಗೆ ಹೋಗಿ ಹಣವನ್ನು ಬದಲಾವಣೆ ಮಾಡಿಕೊಳ್ಳಬಹುದು. ಪ್ರಸ್ತುತ ಇದು ಕೆಲ ಸಮಸ್ಯೆಯನ್ನುಂಟು ಮಾಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಇದು ಸಹಾಯಕವಾಗಿರಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಿಯಲ್ ಎಸ್ಟೇಟ್ ಮೇಲೆ ಭಾರೀ ಹೊಡೆತ ಬೀಳಲಿದೆ ಎಂದಿದ್ದಾರೆ. ಅಲ್ಲದೆ, ಭಾರತದ ಆರ್ಥಿಕ ವಲಯದಲ್ಲಿ ಶೀಘ್ರದಲ್ಲಿಯೇ ನಗದು ರಹಿತ ವ್ಯವಹಾರ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.