

ನವದೆಹಲಿ: ಕಪ್ಪು ಹಣ ವಿರುದ್ಧ ಕ್ರಮಕ್ಕೆ ಸಹಕರಿಸಲು ಎಲ್ಲಾ ಪಕ್ಷಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿರುವ ನಡುವೆಯೇ, ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಕಿಡಿಕಾರಿದ್ದು, ರು.2000 ನೋಟಿನಿಂದ ಕಪ್ಪು ಹಣವನ್ನು ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದುಬಾರಿ ನೋಟಿನ ಮೇಲೆ ನಿಷೇದ ಹೇರುವ ಮೂಲಕ ಕೇಂದ್ರ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರು ಮಾಡಿದೆ. ನೋಟು ನಿಷೇಧ ಕುರಿತಂತೆ ನಾನು ಸಾಕಷ್ಟು ಆರ್ಥಿಕ ತಜ್ಞರು, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ. ನೋಟು ನಿಷೇಧದಿಂದ ಕಪ್ಪುಹಣವನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ರು.500 ಹಾಗೂ 1,000ಕ್ಕಿಂತಲೂ ದೊಡ್ಡ ಮೊತ್ತದ ನೋಟನ್ನು ಚಲಾವಣೆಗೆ ತರಲಾಗಿದೆ. ರು.500 ಹಾಗೂ 1,000 ನೋಟಿನ ಮೇಲೆ ನಿಷೇಧ ಹೇರಿರುವ ಹಿಂದೆ ಯಾವ ತಂತ್ರಗಾರಿಕೆ ಅಡಗಿದೆ? ಕಪ್ಪುಹಣವನ್ನು ನಿಯಂತ್ರಣಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ. ಆದರೆ, ರು.2000 ಮುಖಬೆಲೆ ದುಬಾರಿ ನೋಟು ಚಲಾವಣೆ ಕಪ್ಪುಹಣವನ್ನು ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರಲಿದೆ ಎಂದು ಪ್ರಶ್ನಿಸಿದ್ದಾರೆ. ರಾಜಕೀಯ ಉದ್ದೇಶದಿಂದ ನೋಟಿನ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.