

ನವದೆಹಲಿ: ಪಾಕ್ ಆಕ್ರಮಿತ ಪ್ರದೇಶದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸೀಮಿತ ದಾಳಿಯಿಂದ ಗಡಿ ನಿಯಂತ್ರಣ ರೇಖೆ ಸ್ವಚ್ಛವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏನು ಎಂಬುದನ್ನು ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿ ಮೂಲಕ ತಿಳಿದಿದೆ. ಭಯೋತ್ಪಾದಕರಿಗೆ ತರಬೇತಿ, ಹಣದ ಸಹಾಯ ಮಾಡುತ್ತಿರುವ ನೆರೆ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲಾಗಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಸ್ವಚ್ಛ ಮನಸುಳ್ಳ ವ್ಯಕ್ತಿ ಈಗ ಗಡಿ ಪ್ರದೇಶವನ್ನು ಸಹ ಸ್ವಚ್ಛಗೊಳಿಸಿದ್ದು, ಸ್ವಚ್ಛ ಭಾರತವನ್ನು ಮುಂದೆ ಕೊಂಡೊಯ್ಯಲು ಎಲ್ಲವೂ ಸಿದ್ಧವಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ವೆಂಕಯ್ಯ ನಾಯ್ಡು, ಸ್ವಚ್ಛ ಭಾರತಕ್ಕೆ ಕರೆ ನೀಡಿದ್ದು, ಮಹಾತ್ಮಾ ಗಾಂಧಿ ಸ್ವಾತಂತ್ರ್ಯ ಚಳುವಳಿಗಾಗಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದರು, ಅದರಲ್ಲಿ ಭಾಗವಹಿಸಿದವರು ಸತ್ಯಾಗ್ರಹಿಗಳಾದರು, ಈಗ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕೆ ಕರೆ ನೀಡಿದ್ದು ಇದರಲ್ಲಿ ಭಾಗವಹಿಸುವವರೆಲ್ಲಾ ಸ್ವಚ್ಛಾಗ್ರಹಿಗಳು ಎಂದು ಹೇಳಿದ್ದಾರೆ. ಇದೆ ವೇಳೆ ಮೋದಿ ಪದಕ್ಕೆ ಅರ್ಥ ಹೇಳಿರುವ ವೆಂಕಯ್ಯ ನಾಯ್ಡು ಮೋದಿ ಎಂದರೆ ಮೂಡ್ ಆಫ್ ಡೆವಲಪಿಂಗ್ ಇಂಡಿಯಾ ಎಂದು ಹೇಳಿದ್ದಾರೆ.