

ನವದೆಹಲಿ: ಬಾರಾಮುಲ್ಲಾದ ಸೇನಾ ಶಿಬಿರ ಮೇಲೆ ನಡೆಸಲಾಗಿರುವ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಿರುವ ರಾಜನಾಥ ಸಿಂಗ್ ಅವರು ಗಡಿಯಲ್ಲಿರುವ ಭದ್ರತೆ ಕುರಿತಂತೆ ವರದಿ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಉಗ್ರರ ದಾಳಿ ಪರಿಣಾಮ ಓರ್ವ ಯೋಧ ಹುತಾತ್ಮನಾಗಿದ್ದು, ಹುತಾತ್ಮ ಯೋಧನಿಗೆ ರಾಜನಾಥ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.
ಕಳೆದ ರಾತ್ರಿ 10.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ಉಗ್ರರ ಗುಂಪೊಂದು ದಾಳಿ ನಡೆಸಿದೆ. ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿಯನ್ನು ನಡೆಸಿದ್ದಾರೆ. ಪರಿಣಾಮ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.