

ನವದೆಹಲಿ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿರುವುದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪಾಕ್ ಉಗ್ರರು ಶತಪ್ರಯತ್ನ ನಡೆಸುತ್ತಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ರೇಂಜರ್ ಗಳ ಸಮವಸ್ತ್ರ ಧರಿಸಿ ಅಡ್ಡಾಡುತ್ತಿದ್ದಾರೆ ಎಂಬ ವರದಿಗಳಾಗಿವೆ.
ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಿಂದ ಲ್ಇಟಿ ಉಗ್ರ ಸಂಘಟನೆಗೆ ಹೆಚ್ಚು ಹೊಡೆತ ಬಿದ್ದಿದ್ದು, ಭಾರತದಲ್ಲಿ ಹೆಚ್ಚು ಹಾನಿ ಸಂಭವಿಸುವ ರೀತಿಯಲ್ಲಿ ದಾಳಿ ನಡೆಸಲು ಎಲ್ ಇ ಟಿ ಉಗ್ರ ಸಂಘಟನೆ ಸಂಚು ರೂಪಿಸಿದ್ದು, ಸಂಸತ್ ಭವನ, ದೆಹಲಿ ಸಚಿವಾಲಯಗಳು, ಅಕ್ಷರಧಾಮ ದೇವಾಲಯ ಉಗ್ರರ ಹಿಟ್ ಲಿಸ್ಟ್ ನಲ್ಲಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಇನ್ನು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಸಹ ಸಂಸತ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು ಪಾಕಿಸ್ತಾನದ ಕನಿಷ್ಠ ಮೂರು ಉಗ್ರ ಸಂಘಟನೆಗಳ ಉಗ್ರರು ಭಾರತದೊಳಗೆ ನುಸುಳಲು ಸಿದ್ಧರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಭಾರತದ ಸೀಮಿತ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಮಟ್ಟದಲ್ಲಿ ದಾಳಿ ನಡೆಸಲು ಪಾಕ್ ನ ಐಎಸ್ಐ ಉಗ್ರರಿಗೆ ಸೂಚನೆ ನೀಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.