

ಶ್ರೀನಗರ: ಸರ್ಕಾರಿ ಕಚೇರಿಗೇ ನುಗ್ಗಿ ದಾಳಿ ಮಾಡುತ್ತಿರುವ ಪಾಕಿಸ್ತಾನ ಮೂಲದ ಉಗ್ರರನ್ನು ಸೆದೆಬಡಿಯಲು ನಡೆಯುತ್ತಿರುವ ಸೇನಾಕಾರ್ಯಾಚರಣೆ ಮಂಗಳವಾರವೂ ಮುಂದುವರೆದಿದ್ದು, ನುಸುಕಿನ ಜಾವ ಕೇಳಿಬಂದ ಭಾರಿ ಪ್ರಮಾಣದ ಬಾಂಬ್ ಸ್ಫೋಟದ ಬಳಿಕ ಘಟನಾ ಸ್ಥಳಕ್ಕೆ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗುತ್ತಿದೆ.
ಶ್ರೀನಗರದ ಹೊರವಲಯದ ಉದ್ಯಮ ಅಭಿವೃದ್ಧಿ ಸಂಸ್ಥೆ ಕಚೇರಿಗೆ ಉಗ್ರರು ನುಗ್ಗಿದ್ದು, ಭಾರತೀಯ ಸೈನಿಕರ ಮೇಲೆ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದಾರೆ. ನಿನ್ನೆ ಬೆಳಗ್ಗೆ 6.30ರ ಸುಮಾರಿನಲ್ಲಿ ಉಗ್ರರು ನುಗ್ಗಿದ್ದು, ಸತತ 2ನೇ ದಿನವೂ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಸೇನಾ ಮೂಲಗಳ ಪ್ರಕಾರ ಸುಮಾರು 3 ಕ್ಕೂ ಹೆಚ್ಚು ಉಗ್ರರು ಕಚೇರಿಯೊಳಗೆ ನುಗ್ಗಿದ್ದು, ಎಷ್ಟು ಮಂದಿ ನುಗ್ಗಿದ್ದಾರೆ ಎಂಬ ಖಚಿತ ಮಾಹಿತಿ ಮಾತ್ರ ಈ ವರೆಗೂ ಲಭ್ಯವಾಗಿಲ್ಲ.
ನಿನೆ ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿನ ಸಾವು-ನೋವಿನ ಕುರಿತು ಯಾವುದೇ ವರದಿಗಳು ತಿಳಿದುಬಂದಿಲ್ಲ. ರಾತ್ರಿ 3.30ರ ಹೊತ್ತಿನಲ್ಲಿ ಗುಂಡಿನ ಮೊರೆತ ಸ್ಥಗಿತವಾಗಿತ್ತಾದರೂ, ಮತ್ತೆ 5.30ರ ವೇಳೆಗೆ ಮತ್ತೆ ಉಗ್ರರು ಗುಂಡಿನ ಸುರಿಮಳೆ ಗರೆದರು. ಕಟ್ಟಡಕ್ಕೆ ನುಸುಳಿರುವ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಂದಿದ್ದು, ನಿರಂತರವಾಗಿ ಸ್ಥಳ ಬದಲಾವಣೆ ಮಾಡುವ ಮೂಲಕ ಸೈನಿಕರನ್ನು ಕಂಗೆಡಿಸುವ ಕೆಲಸ ಮಾಡುತ್ತಿದ್ದಾರೆ.
ಉಗ್ರರ ದಾಳಿಗೆ ಪ್ರತ್ಯುತ್ತರ ನೀಡುತ್ತಿರುವ ಸೈನಿಕರು ಕಟ್ಟಡವನ್ನು ಸುತ್ತುವರೆದಿದ್ದು, ಯಾವುದೇ ಕಾರಣಕ್ಕೂ ಉಗ್ರರು ತಪ್ಪಿಸಿಕೊಳ್ಳದಂತೆ ಕಚ್ಚೆಚ್ಚರ ವಹಿಸಿದ್ದಾರೆ.
ಇನ್ನು ಪ್ರಸ್ತುತ ಉಗ್ರ ದಾಳಿಗೆ ತುತ್ತಾಗಿರುವ ಈ ಕಟ್ಟಡದ ಮೇಲೆ ಇದೇ ವರ್ಷ ಎರಡನೇ ಬಾರಿಗೆ ದಾಳಿ ಮಾಡಲಾಗುತ್ತಿದ್ದು, ಕಳೆದ ಫೆಬ್ರವರಿಯಲ್ಲೂ ಉಗ್ರರು ಇದೇ ಕಟ್ಟಡಕ್ಕೆ ನುಗ್ಗಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಭಾರತೀಯ ಯೋಧರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದರು.
ಝೇಲಂ ನದಿ ಮೂಲಕ ನುಸುಳಿದ ಉಗ್ರರು
ಇನ್ನು ಸೇನಾ ಮೂಲಗಳು ತಿಳಿಸಿರುವಂತೆ ದಾಳಿ ನಡೆಸಿರುವ ಉಗ್ರರು ಝೇಲಂ ನದಿ ಮೂಲಕ ಬೋಟ್ ನಲ್ಲಿ ಆಗಮಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿಂದೆ ಇದೇ ನದಿಯಲ್ಲಿ ಶಂಕಾಸ್ಪದ ಬೋಟ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ಈ ಶಂಕೆಗೆ ಕಾರಣವಾಗಿದೆ.