

ನವದೆಹಲಿ: ದೇಶದ ಭದ್ರತೆಗೆ ಅಪಾಯ ಎದುರಾದರೆ ಮತ್ತಷ್ಟು ಸೀಮಿತ ದಾಳಿಗಳನ್ನು ಸೇನೆ ಕೈಗೊಳ್ಳಲಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 29ರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ರಾಜಕೀಯ ಪಕ್ಷಗಳಿಂದ ಅಪಸ್ಪರ ಕೇಳಿಬಂದ ಹಿನ್ನಲೆಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಸೇನಾಧಿಕಾರಿಗಳು ವರದಿಯನ್ನು ನೀಡಿದ್ದಾರೆ.
ದೇಶದಲ್ಲಿ ವಿವಿದೆಡೆ ವಿದ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಭಯೋತ್ಪಾದಕ ಗುಂಪು ಗಡಿಯಾಚೆ ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಒಕೆಯಲ್ಲಿ ಸೀಮಿತ ದಾಳಿ ಕೈಗೊಳ್ಳಲಾಗಿತ್ತು ಎಂದು ಭೂಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತದ ಮೇಲೆ ದಾಳಿ ಮಾಡಲು ಉಗ್ರರಿಗೆ ಬೆಂಬಲಿಸುತ್ತಿರುವ ಪಾಕಿಸ್ತಾನ ಅದನ್ನು ನಿಲ್ಲಿಸಿದರೆ ಮುಂದೆ ಸೀಮತಿಯ ದಾಳಿಯ ಅಗತ್ಯ ಬರುವುದಿಲ್ಲ. ಒಂದು ವೇಳೆ ಪಾಕ್ ಮತ್ತೆ ತನ್ನ ಬೆಂಬಲವನ್ನು ಉಗ್ರರಿಗೆ ನೀಡಿದರೆ, ಆ ದೇಶದ ಉಗ್ರರಿಂದ ದೇಶದ ಭದ್ರತೆಗೆ ಅಪಾಯ ಎದುರಾದರೆ ನಾವು ಮುಂದೆ ಸೀಮಿತ ದಾಳಿ ನಡೆಯುವುದು ಅನಿವಾರ್ಯವಾಗುತ್ತದೆ ಎಂದು ರಾವತ್ ಹೇಳಿದ್ದಾರೆ.