ನವದೆಹಲಿ: ಪಾಕಿಸ್ತಾನ ಹೈ ಕಮಿಷನ್ ಅಧಿಕಾರಿಯೊಬ್ಬರು ಅಕ್ರಮವಾಗಿ ನಡೆಸುತ್ತಿದ್ದ ಬೇಹುಗಾರಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜೋಧಪುರ ಮೂಲದ ಪಾಸ್ ಪೋರ್ಟ್ ಮತ್ತು ವೀಸಾ ಏಜೆಂಟ್ ನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಮೊನ್ನೆ ಬುಧವಾರ ಪಾಕಿಸ್ತಾನದ ಹೈ ಕಮಿಷನ್ ಅಧಿಕಾರಿ ಮೆಹಮೂದ್ ಅಖ್ತರ್ ಮತ್ತು ಇಬ್ಬರು ಭಾರತೀಯರಾದ ಮೌಲಾನಾ ರಂಜಾನ್ ಮತ್ತು ಸುಭಾಷ್ ಜಂಗೀರ್ ನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ವೀಸಾ ಏಜೆಂಟ್ ಶೋಯೆಬ್ ತಪ್ಪಿಸಿಕೊಂಡಿದ್ದ. ಅವನನ್ನು ನಿನ್ನೆ ಸಂಜೆ ಜೋಧಪುರದಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೋಯೆಬ್ ನನ್ನು ಅಮಾನ್ಯ ವ್ಯಕ್ತಿ ಎಂದು ಘೋಷಿಸಲಾಗಿದ್ದು ಸುಭಾಷ್ ಮತ್ತು ಮೌಲಾನಾ ಅವರನ್ನು, ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಗಡಿ ಭದ್ರತಾ ಪಡೆಗಳ ನಿಯೋಜನೆ ವಿವರಗಳನ್ನು, ಸೂಕ್ಷ್ಮ ಮಾಹಿತಿಗಳು ಮತ್ತು ರಕ್ಷಣಾ ದಾಖಲೆಗಳನ್ನು ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಬಂಧಿತರನ್ನು 12 ದಿನಗಳವರೆಗೆ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ. ಸುಭಾಷ್ ಮತ್ತು ಮೌಲಾನನನ್ನು ನೇಮಕಾತಿ ಮಾಡಿಕೊಂಡ ಆರೋಪವನ್ನು ಶೋಯೆಬ್ ಎದುರಿಸುತ್ತಿದ್ದಾನೆ.
ಒಂದೂವರೆ ವರ್ಷ ಹಿಂದೆ ಮೌಲಾನಾ ಸಂಪರ್ಕ ಬೆಳೆಸಿಕೊಂಡ ಶೋಯೆಬ್ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಸೇನೆ ಮತ್ತು ಅರೆಸೇನಾಪಡೆ ನಿಯೋಜನೆ ಕುರಿತು ಪ್ರಮುಖ ಮಾಹಿತಿಗಳನ್ನು ಕಲೆ ಹಾಕುವಂತೆ ಸೂಚಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಯೆಬ್ ಬಂಧನದಿಂದ ಅಕ್ರಮ ಬೇಹುಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಇನ್ನಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.