

ಮಲ್ಕಂಗಿರಿ (ಒಡಿಶಾ): ಶವ ಸಾಗಣೆಗೆ ಹಣವಿಲ್ಲದೆ ಪತ್ನಿಯ ಮೃತದೇಹವನ್ನು ಹೊತ್ತ ಪತಿಯೊಬ್ಬ ಕಿಲೋಮೀಟರ್ ಗಟ್ಟಲೆ ನಡೆದಿದ್ದ. ಈ ಘಟನೆ ಮಾಸುವ ಮುನ್ನವೇ ಒಡಿಶಾದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ.
ಆ್ಯಂಬುಲೆನ್ಸ್ ಚಾಲಕನೊಬ್ಬ ನಡುರಸ್ತೆಯಲ್ಲೇ ಕೈಬಿಟ್ಟ ಕಾರಣ 7 ವರ್ಷದ ತನ್ನ ಮಗಳ ಮೃತ ದೇಹವನ್ನು ಹೊತ್ತ ತಂದೆಯೊಬ್ಬ 5 ಕಿ.ಮೀ ವರೆಗೂ ಕಣ್ಣೀರಿಡುತ್ತಾ ನಡೆದಿರುವ ಘಟನೆಯೊಂದು ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿದೆ.
ಬರ್ಶಾ ಖೆಮುಡು (7) ಮೃತಪಟ್ಟ ಬಾಲಕಿ. ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಾಲಕಿಯನ್ನು ಮಥಿಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ನಾಯಕ್ ಗುಡ ಪ್ರದೇಶದ ಬಳಿ ಬರುತ್ತಿದ್ದಂತೆ ಬಾಲಕಿಯ ಸ್ಥಿತಿ ಚಿಂತಾಜನಕವಾಗಿ ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಳು.
ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಮೃತದೇಹದೊಂದಿಗೆ ಪೋಷಕರನ್ನು ನಡುರಸ್ತೆಯಲ್ಲಿಯೇ ಇಳಿಸಿದ್ದಾನೆ. ಈ ರಸ್ತೆಯಲ್ಲಿ ವಾಹನಗಳು ಚಲಿಸುವುದು ಅತ್ಯಂತ ವಿರಳವಾಗಿದ್ದರಿಂದ ಬೇರಾವುದೇ ವಾಹನಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಗಳ ಸಾವಿನ ದುಃಖದಲ್ಲಿದ್ದ ಪೋಷಕರು ಕಣ್ಣೀರಿಡುತ್ತಾ 5 ಕಿ.ಮೀ ವರೆಗೂ ನಡೆದು ಹೋಗಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಕೆ. ಸುಧರ್ಶನ್ ಚಕ್ರಬೋರ್ತಿ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.
ಮೃತದೇಹವನ್ನು ನಡುರಸ್ತೆಯಲ್ಲಿ ಬಿಡುವ ಮೂಲಕ ಆ್ಯಂಬುಲೆನ್ಸ್ ಚಾಲಕ ನಿರ್ಲಕ್ಷ್ಯತೆ ತೋರಿದ್ದಾನೆ. ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.