

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮರೆದಿದ್ದು, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
3-4 ಉಗ್ರರ ಗುಂಪು ಇಂದು ಬೆಳಿಗ್ಗೆ 5.30ರ ಸುಮಾರಿಗೆ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದ್ದು, ಕಚೇರಿಯ ಒಳಭಾಗದಲ್ಲಿ ಬಾಂಬ್ ಸ್ಫೋಟಿಸುತ್ತಿದ್ದಾರೆಂದು ತಿಳಿದುಬಂದಿದೆ.
ಗಡಿಯಲ್ಲಿರುವ ಭದ್ರತಾ ಕಂಬಿಗಳನ್ನು ಮುರಿದು ಒಳನುಗ್ಗಿರುವ ಉಗ್ರರು, ಸೇನಾ ಪ್ರಧಾನ ಕಚೇರಿ ಎದುರೇ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾರೆ. ಅಲ್ಲದೆ, ಅಮಾನುಷವಾಗಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 12ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, 17 ಯೋಧರು ಹುತಾತ್ಮರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಉಗ್ರರು ದಾಳಿ ನಡೆಸುತ್ತಿದ್ದಂತೆ ಪ್ರತಿ ದಾಳಿ ನಡೆಸಿದ್ದ ಭಾರತೀಯ ಸೇನಾ ಪಡೆ, ಕಾರ್ಯಾಚರಣೆ ನಡೆಸಿ ನಾಲ್ವರೂ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಹೊತ್ತುಕೊಂಡಿರುವುದಾಗಿ ಹೇಳಲಾಗುತ್ತಿದೆ.
ಸ್ಥಳದಲ್ಲಿ ಈಗಾಗಲೇ ವಿಶೇಷ ಸೇನಾ ದಳ ಬೀಡುಬಿಟ್ಟಿದ್ದು, ಗಾಯಗೊಂಡ ಯೋಧರನ್ನು ರಕ್ಷಣೆ ಮಾಡುತ್ತಿದೆ. ಗಾಯಗೊಂಡ ಯೋಧನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ದಾಳಿ ಹಿನ್ನೆಲೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೈಗೊಂಡಿದ್ದ ರಷ್ಯಾ ಮತ್ತು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ದಾಳಿ ಕುರಿತಂತೆ ಗೃಹ ಸಚಿವರು ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.