

ತಿರುವನಂತಪುರ: ಕೇರಳದ ಕಡಂತ್ರಾ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ಮೂವರು ಸಾವನ್ನಪ್ಪಿ, 3 ಮಂದಿ ನಾಪತ್ತೆಯಾದ ಘಟನೆ ಕಲ್ಲಿಕೋಟೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ಕಲ್ಲಿಕೋಟೆ ಸಮೀಪ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ 9 ಮಂದಿ ನೀರಿಗಿಳಿದಿದ್ದು, ಈ ವೇಳೆ ನದಿ ದಿಢೀರ್ ಉಕ್ಕಿ ಹರಿದಿದೆ. ನದಿಯಲ್ಲಿ ಇದ್ದಕ್ಕಿದಂತೆ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಎಲ್ಲ 9 ಮಂದಿ ಪ್ರವಾಹಕ್ಕೆ ಸಿಲುಕಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಮೂವರನ್ನು ರಕ್ಷಿಸಿದ್ದು, ಮತ್ತೆ ಮೂರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮೂರು ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಅಗ್ನಿ ಶಾಮಕ ದಳ ಹಾಗೂ ಈಜು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಮೃತರನ್ನು ರಾಜೇಶ್, ಸಜಿನ್ ಶಶಿ ಎಂದು ಗುರುತಿಸಲಾಗಿದ್ದು, ಮೂರನೇ ಶವದ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಗಾಯಾಳುಗಳನ್ನು ಕುಟ್ಯಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಯಾವುದೇ ಪೂರ್ವ ಮಾಹಿತಿ ಇಲ್ಲದೇ ನದಿಗೆ ನೀರು ಹರಿಸಲಾಗಿದೆ. ಸ್ಥಳೀಯರಿಗೆ ನೀರು ಹರಿವಿನ ಕುರಿತು ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ತಿಳಿದಿದ್ದರೆ ನದಿಗೆ ಇಳಿಯುತ್ತಿರಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.