

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗ್ರೆನೇಡ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 5 ಸಿಆರ್'ಪಿಎಫ್ ಯೋಧರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ವಾನ್ಪೋಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿ ನಡೆಸಲಾಗಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ನಾಗರೀಕರಿಗೆ ಗಾಯಗಳಾಗಿರುವ ಕುರಿತಂತೆ ವರದಿಗಳಾಗಿಲ್ಲ. ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.
ಕೆಲ ದಿನಗಳ ಹಿಂದಷ್ಟೇ ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರ ಗುಂಪೊಂದು ದಾಳಿ ಮಾಡಿತ್ತು. ದಾಳಿಯಲ್ಲಿ 18 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ. ದಾಳಿ ಮಾಡಿದ ಎಲ್ಲಾ ಉಗ್ರರನ್ನು ಸದೆಬಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದರು.