ಪಾಟ್ನಾ: ಬಿಹಾರ ಸರ್ಕಾರದ ಮದ್ಯ ನಿಷೇಧ ಆದೇಶವನ್ನು ಪಾಟ್ನಾ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಕಳೆದ ಏಪ್ರಿಲ್ ನಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಗೆ ಭಾರಿ ಹಿನ್ನಡೆಯಾಗಿದೆ.
ಮದ್ಯ ಮಾರಾಟ ನಿಷೇಧ ಆದೇಶ ಪ್ರಶ್ನಿಸಿದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಬಿಹಾರ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಹೇಳಿದೆ.
ಇದೀಗ ನಿತೀಶ್ ಕುಮಾರ್ ಜಾರಿಗೆ ತಂದ ಹೊಸ ಕಾಯ್ದೆಯನ್ನು ಪಾಟ್ನಾ ಹೈಕೋರ್ಟ್ ರದ್ದು ಮಾಡಿ, ಇದು ಕಾನೂನು ಬಾಹಿರ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಬಿಹಾರ ಸರ್ಕಾರ ಹೊರಡಿಸಿದ್ದ ಹೊಸ ಮಸೂದೆಗೆ ರಾಜ್ಯಪಾಲರಾದ ರಾಮ್ ನಾಥ್ ಕೋವಿಂದ್ ಅವರು ಸೆಪ್ಟೆಂಬರ್ 7ರಂದು ಅಂಕಿತ ಹಾಕಿದ್ದರು.
ಬಿಹಾರ ರಾಜ್ಯದಲ್ಲಿ ಏಪ್ರಿಲ್ 1ರಿಂದ ಸಂಪೂರ್ಣ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದರು. ಈ ಹೊಸ ಕಾಯ್ದೆ ಜಾರಿಯಿಂದಾಗಿ ಒಂದು ವೇಳೆ ಮನೆಯಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ಮದ್ಯ ಪತ್ತೆಯಾದರೆ ಜಾಮೀನು ರಹಿತ ಅಪರಾಧ ಹಾಗೂ ಬಂಧನ ಶಿಕ್ಷೆ ಅನುಭವಿಸಬೇಕಾಗಿತ್ತು.