ನವದೆಹಲಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದು ಪಕ್ಷಪಾತವಾಗಿದೆ. ಆದರೂ ಇದು ಸರಿಯಾದ ದಿಕ್ಕಿನಲ್ಲಿ ಸಾಗುವ ಕ್ರಮವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು ಮಾಡಿದ ಸರಣಿ ಟ್ವೀಟ್ ನಲ್ಲಿ ಅವರು, ಈ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕಿದ್ದು ಕೇವಲ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಮಾತ್ರ ರೈತರ ಸಾಲ ಮನ್ನಾ ಮಾಡಿ ತಾರತಮ್ಯ ಧೋರಣೆ ತಾಳಬಾರದು ಎಂದು ಹೇಳಿದ್ದಾರೆ.
ದೇಶಾದ್ಯಂತ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಸಾಲ ಮನ್ನಾ ಮಾಡಲು ಹೊರಟಿರುವ ಉತ್ತರ ಪ್ರದೇಶ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ನಿನ್ನೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಸಣ್ಣ ಮತ್ತು ಅತಿಸಣ್ಣ ರೈತರ 1 ಲಕ್ಷಕ್ಕಿಂತ ಕೆಳಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು.
ಆದರೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದ ಘೋಷಣೆಯನ್ನು ಟೀಕಿಸಿದೆ. ಸರ್ಕಾರ ರೈತರ ನಂಬಿಕೆಗೆ ದ್ರೋಹ ಮಾಡಿದೆ. 1 ಲಕ್ಷದವರೆಗಿನ ಸಾಲ ಮಾತ್ರ ಮನ್ನಾ ಮಾಡುವುದಾಗಿ ಹೇಳುವ ಮೂಲಕ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.