ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದ ನಡುವೆ ಹಾದು ಹೋಗುವ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಚೀನಾ, ಸಿಪಿಇಸಿ ಯೋಜನೆ ಕಾಶ್ಮೀರ ವಿಷಯಕ್ಕೂ ಸಿಪಿಇಸಿ ಯೋಜನೆಗೂ ನೇರ ಸಂಬಂಧವಿಲ್ಲ, ಅದು ಕೇವಲ ಆರ್ಥಿಕ ಯೋಜನೆಯಷ್ಟೇ ಎಂದು ಹೇಳಿದೆ.
ಚೀನಾದ ಯೋಜನೆಯಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಹ್ವಾನ ನೀಡಲಾಗಿತ್ತು, ಈಗಲೂ ಭಾರತದ ಪಾಲ್ಗೊಳ್ಳುವಿಕೆಯನ್ನು ಸ್ವಾಗತಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸಿಲ್ಕ್ ರೋಡ್ ಯೋಜನೆಗೆ ಒಬಿಒಆರ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ನೆರೆರಾಷ್ಟ್ರಗಳು ಹಾಗೂ ವಿಶ್ವಾದ್ಯಂತ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಈ ಯೋಜನೆ ನೆರವಾಗಲಿದೆ ಎಂದು ಚೀನಾ ಹೇಳಿದೆ. ಒಬಿಒಆರ್ ಯೋಜನೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಇನ್ನೂ ಸ್ಪಷ್ಟನೆ ನೀಡದ ಭಾರತ ಸಿಪಿಇಸಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಆರ್ಥಿಕ ಕಾರಿಡಾರ್ ಯೋಜನೆಯನ್ನು ಆರ್ಥಿಕ ದೃಷ್ಟಿಯಿಂದಲೇ ನೋಡಬೇಕು. ಸಿಪಿಇಸಿ ಯೋಜನೆಗೂ ಕಾಶ್ಮೀರದ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವರು ಹೇಳಿದ್ದಾರೆ.