ಹರಿದ್ವಾರ: ನಾನು ಸುರಕ್ಷಿತನಾಗಿದ್ದು, ಆರೋಗ್ಯವಾಗಿದ್ದೇನೆ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವದಂತಿಗಳನ್ನು ನಂಬಬಾರದು ಎಂದು ಯೋಗ ಗುರು ಹಾಗೂ ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್'ದೇವ್ ಅವರು ಹೇಳಿದ್ದಾರೆ.
ವದಂತಿ ಕುರಿತಂತೆ ಸಾಮಾಜಿಕ ತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಾಬ್ ರಾಮ್ ದೇವ್ ಅವರು, ನಾನು ಹರಿದ್ವಾರದಲ್ಲಿದ್ದು, ಸಾವಿರಾರು ಭಕ್ತರಿಗೆ ಯೋಗ ಹೇಳಿಕೊಡುತ್ತಿದ್ದೇನೆ. ನಾನು ಸುರಕ್ಷಿತನಾಗಿದ್ದು, ಆರೋಗ್ಯವಾಗಿದ್ದೇನೆ. ವದಂತಿನಗಳನ್ನು ನಂಬಬೇಡಿ ಎಂದು ಭಕ್ತರಿಗೆ ಮನವಿ ಮಾಡಿದ್ದಾರೆ.
ಪುಣೆಯಿಂದ ಮುಂಬೈಗೆ ಪ್ರಯಾಣ ಮಾಡುವಾಗ ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದ ಅಪಘಾತವೊಂದರಲ್ಲಿ ಬಾಬಾ ರಾಮ್ ದೇವ್ ಅವರು ಮೃತಪಟ್ಟಿದ್ದಾರೆಂಬ ಸುಳ್ಳು ಸುದ್ದಿಯೊಂದು ವಾಟ್ಸ್'ಅಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಅಪಘಾತ ಸಂಭವಿಸಿರುವುದಾಗಿ ನಂಬಿಸಲು ಭಾವಚಿತ್ರಗಳನ್ನೂ ಕೂಡ ಹಾಕಲಾಗಿದ್ದು, ಈ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿಯೇ ಹರಿಯ ಬಿಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಸುಳ್ಳು ಸುದ್ದಿಯನ್ನು ನಂಬಿದ್ದ ಜನತೆ ಸಾಕಷ್ಟು ಆಘಾತಗೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀದಿದ್ದ ಹೆದ್ದಾರಿ ನಿಯಂತ್ರಣ ಅಧಿಕಾರಿಗಳು ಪುಣೆ-ಮುಂಬೈ ಹೆದ್ದಾರಿಯಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿಲ್ಲ ಎಂದು ದೃಢಪಡಿಸಿದ್ದರು.
ಪ್ರಸ್ತುತ ಸುಳ್ಳು ಸುದ್ದಿ ಜೊತೆಗೆ ಹರಿದಾಡುತ್ತಿರುವ ಭಾವಚಿತ್ರಗಳು, ಬಾಬಾ ರಾಮ್ ಅವರು ಕಪ್ಪುಹಣದ ವಿರುದ್ಧ 6 ವರ್ಷದ ಹಿಂದೆ ಉಪವಾಸ ಮಾಡಿದಾಗ ಸ್ಟ್ರೆಚರ್ ಮೇಲೆ ಆಸ್ಪತ್ರೆಗೆ ಸೇರಿಸಿದ ಚಿತ್ರ ಅದಾಗಿದೆ. ಇನ್ನೊಂದು ಚಿತ್ರ ಬಿಹಾರದ ಬಕ್ಸರ್ ಜಿಲ್ಲಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಂಭವಿಸಿದ್ದ ಕಾರು ಅಪಘಾತದ್ದಾಗಿದೆ ಎಂದು ಮೂಲಗಳು ತಿಳಿಸಿವೆ.