ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಉಗ್ರರ ವಿರುದ್ಧ ಹೋರಾಡಲು ಭಾರತೀಯ ಸೇನೆ ನೂರಾರು ಸ್ವದೇಶಿ ನಿರ್ಮಿತ ರೋಬೋಟ್'ಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ.
ಈ ರೋಬೋಟ್ ಗಳು ನಿಗದಿತ ಸ್ಥಳಗಳಲ್ಲಿ ಮದ್ದುಗುಂಡುಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಉಗ್ರರ ವಿರುದ್ಧದ ಕಾರ್ಯಾಚರಣೆಗೆ 544 ರೋಬೋಟ್ ಗಳನ್ನು ಒದಗಿಸುವಂತೆ ಸೇನೆಯ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಲು ರಾಷ್ಟ್ರೀಯ ರೈಫಲ್ಸ್ ಪಡೆಯನ್ನು ನಿಯೋಜಿಸಲಾಗಿದೆ. ಉಗ್ರರ ಉಪಟಳವಿರುವ ಅರಣ್ಯ ಪ್ರದೇಶಗಳು, ನಗರ ಪ್ರದೇಶಗಳಲ್ಲಿ ಯಾಂತ್ರಿಕ ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆಗೆ ರೋಬೋಟ್ ಗಳು ಬಳಕೆಯಾಗಲಿವೆ. ಉಗ್ರರ ಒಳ ನುಸುಳುವಿಕೆಯ ಬಗ್ಗೆ ರೋಬೋಟಿಕ್ ಕಣ್ಗಾವಲು ವ್ಯವಸ್ಥೆ ಸೇನೆಗೆ ಕರಾರುವಕ್ಕಾದ ಮಾಹಿತಿಯನ್ನು ಒದಗಿಸಲಿದೆ.
ಹಗುರ ಮತ್ತು ಒರಟಾದ ರೋಬೋಟ್ ಗಳು, ಕಣ್ಗಾವಲು ಕ್ಯಾಮರಾಗಳನ್ನು ಮತ್ತು 200 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ ಮಿಷನ್ ವ್ಯವಸ್ಥೆ ಹೊಂದಿವೆ. ಅಲ್ಲದೇ, ಗ್ರೆನೇಡ್ ಸೇರಿದಂತೆ ಉಪಯುಕ್ತ ಶಸ್ತ್ರಾಸ್ತ್ರಗಳನ್ನು ನಿಗದಿತ ಸ್ಥಳದಲ್ಲಿ ಸೇನೆಗೆ ಪೂರೈಸಲಿವೆ.