

ಚಂಡೀಘಡ: ಡೇರಾ ಸಚ್ಚಾ ಸೌಧ ಸಂಸ್ಥೆಯ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಇದೇ ಪ್ರಕರಣ ಸಂಬಂಧ ಇದೀಗ ರಾಜಧಾನಿ ದೆಹಲಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ.
ಸಾಕಷ್ಟು ಹಿಂಸಾಚಾರ, ಸಾವುನೋವು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಷ್ಟಕ್ಕೆ ಕಾರಣವಾಗಿರುವ ಈ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.
2002ರಲ್ಲಿ ಮೊದಲ ಬಾರಿಗೆ ಡೆರಾ ಸಚ್ಚಾ ಸೌಧದ ಇಬ್ಬರು ಮಹಿಳಾ ಅನುಯಾಯಿಗಳು ತಮ್ಮ ಮೇಲೆ ಬಾಬಾ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆ ಪತ್ರದಲ್ಲಿ ಮಹಿಳೆಯರು ಕೇವಲ ತಮ್ಮ ಮೇಲೆ ಮಾತ್ರವಲ್ಲ ಸೇವೆಯ ಹೆಸರಿನಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಸಿರ್ಸಾದಲ್ಲಿನ ಆಶ್ರಮದಲ್ಲಿನ ರಹಸ್ಯ ಕೋಣೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದರು.
ಬಳಿಕ ಈ ಪತ್ರ ಮಾಧ್ಯಮಗಳ ಕೈಗೆ ಸಿಕ್ಕು ಭಾರಿ ಪ್ರಮಾಣದ ಪ್ರಚಾರ ಮತ್ತು ಸುದ್ದಿಗೆ ಗ್ರಾಸವಾಯಿತು. ಈ ಪ್ರಕರಣ ಗಂಭೀರತೆಯನ್ನು ಅರಿತ ಪಂಜಾಬ್-ಹರ್ಯಾಣ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸಿಬಿಐ ಸಂಸ್ಥೆಗೆ ನಿರ್ದೇಶನ ನೀಡಿತು. ಹೈಕೋರ್ಟ್ ನಿರ್ದೇಶನದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸಿಬಿಐ, ಡೇರಾ ಸಚ್ಚಾ ಆಶ್ರಮದ ಒಟ್ಟು 18 ಸಾಧ್ವಿಗಳನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿತು. ಈ ಪೈಕಿ ಇಬ್ಬರು ಸಾಧ್ವಿಯರು ತಮ್ಮ ಮೇಲೆ ಅತ್ಯಾಚಾರವಾದ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಈ ಪೈಕಿ ಓರ್ವ ಸಾಧ್ವಿ ಅತ್ಯಾಚಾರದ ಬಳಿಕ ನಾನು ಪವಿತ್ರಳಾಗಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಅತ್ಯಾಚಾರವನ್ನು ಸಮರ್ಥಿಸಿಕೊಂಡಿದ್ದರು.
ಇಬ್ಬರೂ ಸಾಧ್ವಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು, 2007ರ ಜುಲೈ 30ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಮ್ಮ ಆರೋಪ ಪಟ್ಟಿ ಸಲ್ಲಿಕೆ ಮಾಡಿದರು. ಆರೋಪ ಪಟ್ಟಿಯಲ್ಲಿ ಓರ್ವ ಸಾಧ್ವಿ ಹೇಳಿಕೆಯನ್ನು ಅಧಿಕಾರಿಗಳು ಉಲ್ಲೇಖಿಸದ್ದರು. ಅದರಂತೆ ತಾನು ರಾಮ್ ರಹೀಮ್ ಕೋಣೆಗೆ ಭೇಟಿ ನೀಡಿದಾಗ ಅವರ ರಹಸ್ಯ ಕೋಣೆಯ ಬಾಗಿಲು ತನ್ನಿಂತಾನೇ ಮುಚ್ಚಿಕೊಂಡಿತು. ಈ ವೇಳೆ ಬಾಬಾ ರಾಮ್ ರಹೀಮ್ ಅವರು ದೊಡ್ಡದಾದ ಟಿವಿ ಪರದೆಯಲ್ಲಿ ಅಶ್ಲೀಲ ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಈ ರಹಸ್ಯ ಕೋಣೆಗೆ ಬಾಬಾ ರಾಮ್ ರಹೀಮ್ ಅವರ ಕೆಲ ಪರಮಾಪ್ತ ಭಕ್ತರಿಗೆ ಮಾತ್ರ ಪ್ರವೇಶವಿತ್ತು ಎಂದು ಮಹಿಳೆ ಹೇಳಿಕೊಂಡಿದ್ದರು.
ಸುಧೀರ್ಘ ವಿಚಾರಣೆ ಬಳಿಕ 2008 ಸೆಪ್ಟೆಂಬರ್ 6ರಂದು ಬಾಬಾ ರಾಮ್ ರಹೀಮ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಐಪಿಸಿ ಸೆಕ್ಷನ್ 506 (ಕೊಲೆ ಬೆದರಿಕೆ) ಸಂಬಂಧ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡರು. ಆದರೆ ಈ ಬಗ್ಗೆ ಸತತವಾಗಿ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದ ಡೇರಾ ಸಚ್ಚಾ ಸಂಸ್ಥೆ, ಬಾಬಾ ರಾಮ್ ರಹೀಮ್ ಅವರು ದೈಹಿಕ ಸಂಪರ್ಕ ಹೊಂದುವ ಸಾಮರ್ಥ್ಯ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದೇ ಪ್ರಕರಣ ಸಂಬಂಧ ಬಾಬಾ ರಾಮ್ ರಹೀಮ್ ವಿರುದ್ಧ 2 ಕೊಲೆ ಪ್ರಕರಣಗಳೂ ಕೂಡ ದಾಖಲಾಗಿತ್ತು. ರಂಜಿತ್ ಸಿಂಗ್ ಎಂಬ ಸಾಮಾಜಿಕ ಕಾರ್ಯಕರ್ತ ಹಾಗೂ ರಾಮ್ ಛತ್ರಪತಿ ಎಂಬ ಪತ್ರಕರ್ತರನ್ನು ಕೊಲೆ ಮಾಡಿದ ಕುರಿತು ಬಾಬಾ ರಾಮ್ ರಹೀಮ್ ವಿರುದ್ಧ ದೂರು ದಾಖಲಾಗಿವೆ. ಮೂಲಗಳ ಪ್ರಕಾರ ಈ ಹಿಂದೆ ಅತ್ಯಾಚಾರ ಆರೋಪ ಮಾಡಿದ್ದ ಮಹಿಳಾ ಭಕ್ತೆಯ ಪತ್ರವನ್ನು ಪ್ರಧಾನಿ ವಾಜಪೇಯಿ ಅವರಿಗೆ ತಲುಪಿಸಿದ್ದೇ ಸಾಮಾಜಿಕ ಕಾರ್ಯಕರ್ತ ರಂಜಿತ್ ಸಿಂಗ್ ಎಂದು ಹೇಳಲಾಗಿದೆ. ಹೀಗಾಗಿಯೇ ಬಾಬಾ ರಾಮ್ ರಹೀಮ್ ಅವರು ರಂಜಿತ್ ಸಿಂಗ್ ರನ್ನು ಹತ್ಯೆ ಮಾಡಿಸಿದರು ಎಂದು ರಂಜಿತ್ ಕುಟುಂಬಸ್ಥರು ಆರೋಪಿಸಿದ್ದರು. ಅಂತೆಯೇ ಮಹಿಳೆ ಬರೆದ ಪತ್ರವನ್ನು ಹಾಗೂ ಡೇರಾ ಸಚ್ಚಾ ಆಶ್ರಮದ ಕುರಿತು ರಹಸ್ಯ ಮಾಹಿತಿಗಳನ್ನು ಮಾಧ್ಯಮಗಳಿಗೆ ಲೀಕ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರಾಮ್ ಛತ್ರಪತಿ ಅವರನ್ನು ಕೊಲೆ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೂಡ ಬಾಬಾ ರಾಮ್ ರಹೀಮ್ ಅವರ ಮೇಲಿದೆ.
ಇದೇ ಹೊತ್ತಿನಲ್ಲೇ ಸಿಬಿಐ ಹೈಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಬಾಬಾ ರಾಮ್ ರಹೀಮ್ ಅವರಿಗೆ ಸೂಚನೆ ನೀಡಿದ ಬೆನ್ನಲ್ಲೇ ಆಶ್ರಮದ ಹತ್ತಾರು ಅನುಯಾಯಿಗಳು ಆತ್ಮಹತ್ಯೆಗೆ ಶರಣಾದರು. ಈ ಘಟನೆಯನ್ನೇ ನೆಪವಾಗಿಸಿಕೊಂಡ ಬಾಬಾ ರಾಮ್ ರಹೀಮ್ ಪ್ರಕರಣದ ಯಾವುದೇ ವಿಚಾರಣೆಗೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಇಂದು ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು. ನ್ಯಾಯಾಲಯ ಬಾಬಾ ರಾಮ್ ರಹೀಮ್ ರನ್ನು ದೋಷಿ ಎಂದು ತೀರ್ಪು ನೀಡಿದೆ.