

ಚಂಡೀಘಡ: ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಅವರ ಆಪ್ತ ಬೆಂಬಲಿಗರ ವಿರುದ್ಧ ಇದೀಗ ದೇಶದ್ರೋಹ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಅತ್ಯಾಚಾರ ಪ್ರಕರಣ ಸಂಬಂಧ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ಬಾಬಾ ರಾಮ್ ರಹೀಮ್ ರನ್ನು ದೋಷಿ ಎಂದು ತೀರ್ಪು ನೀಡಿದಾಗ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಅಧಿಕಾರಿಗಳನ್ನು ತಡೆದ ಬಾಬಾ ಆಪ್ತರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ. ಅಂತೆಯೇ ಬಾಬಾ ರಾಮ್ ರಹೀಮ್ ರ ಬಂಧನಕ್ಕೆ ಅವಖಾಸ ನೀಡದ ಹಿನ್ನಲೆಯಲ್ಲಿ ಬಾಬಾ ಬೆಂಬಲಿಗರ ವಿರುದ್ಧ ಅಧಿಕಾರಿಗಳು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಅಧಿಕಾರಿಗಳು ಕರ್ತವ್ಯಕ್ಕೆ ಬೆಂಬಲಿಗರು ಅಡ್ಡಿ ಪಡಿಸಿದ್ದು, ಬಾಬಾ ಅವರು ಇಬ್ಬರು ಆಪ್ತರು ಹಾಗೂ 6 ಮಂದಿ ಖಾಸಗಿ ಭದ್ರತಾ ಸಿಬ್ಬಂದಿಗಳ ವಿರುದ್ಧ ಇದೀಗ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಅಂಬಾಲಾದಲ್ಲಿ ಪೆಟ್ರೋಲ್ ಬಾಂಬ್ ಹಿಡಿದಿದ್ದ ಇಬ್ಬರು ಅನುಯಾಯಿಗಳ ಬಂಧನ
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಅಂಬಾಲಾದಲ್ಲಿ ಹಿಂಸೆ ನಡೆಸಲು ಮುಂದಾಗಿದ್ದ ನಾಲ್ಕು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಾಂಬ್ ಹಿಡಿದು ಹೋಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು 4 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ಕು ಮಂದಿ ದುಷ್ಕರ್ಮಿಗಳು ಡೇರಾ ಸಚ್ಚಾ ಆಶ್ರಮದ ಅನುಯಾಯಿಗಳು ಎಂದು ಹೇಳಲಾಗಿದೆ.