ತಮಿಳುನಾಡು: ಜ್ಯೋತಿಷಿ ಮಾತು ಕೇಳಿ ಮಗನನ್ನು ಶಾಲೆಗೆ ಕಳುಹಿಸದ ತಾಯಿ!

ಬಡತನ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುವ ಪ್ರಸಂಗ ನೋಡಿದ್ದೇವೆ...
ಮಕ್ಕಳ ಸಹಾಯವಾಣಿ ಅಧಿಕಾರಿ ಜೊತೆ ಶಿವನೇಶ್ ಕುಮಾರ್ ಮತ್ತು ಆತನ ತಾಯಿ ಶಾಲೆಗೆ ಹೋಗುತ್ತಿರುವುದು
ಮಕ್ಕಳ ಸಹಾಯವಾಣಿ ಅಧಿಕಾರಿ ಜೊತೆ ಶಿವನೇಶ್ ಕುಮಾರ್ ಮತ್ತು ಆತನ ತಾಯಿ ಶಾಲೆಗೆ ಹೋಗುತ್ತಿರುವುದು
Updated on: 
ನಾಗಪಟ್ಟಿಣಂ: ಬಡತನ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುವ ಪ್ರಸಂಗ ನೋಡಿದ್ದೇವೆ. ಆದರೆ ಜ್ಯೋತಿಷಿಯೊಬ್ಬರ ಮಾತಿನಂತೆ ಇಲ್ಲೊಬ್ಬ ತಾಯಿ ತನ್ನ 13 ವರ್ಷದ ಬಾಲಕನನ್ನು ಕಳೆದ ಆಗಸ್ಟ್ ನಿಂದ ಶಾಲೆಗೆ ಕಳುಹಿಸದೆ ಮನೆಯಲ್ಲಿ ಉಳಿಸಿಕೊಂಡಿರುವ ಘಟನೆ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿ ನಡೆದಿದೆ. 
ಮಕ್ಕಳ ಸಹಾಯವಾಣಿಗೆ ಈ ಪ್ರಕರಣ ಕೇಳಿ ನಿಜಕ್ಕೂ ಆಘಾತವಾಗಿದೆ.ನಾಗಪಟ್ಟಿಣಂ ಜಿಲ್ಲೆಯ ತಿರುಕ್ಕುವಲೈ ತಾಲ್ಲೂಕಿನ ಕೊತಂಗುಡಿ ಸರ್ಕಾರಿ ಶಾಲೆಯಲ್ಲಿ ಶಿವನೇಶ್ ಕುಮಾರ್ 9ನೇ ತರಗತಿಯಲ್ಲಿ ಓದುತ್ತಿದ್ದ. ಆತನ ತಾಯಿ ಸೆಲ್ವಿ, ಒಂದು ದಿನ ಜ್ಯೋತಿಷಿಯೊಬ್ಬರ ಹತ್ತಿರ ಹೋಗುತ್ತಾರೆ. ಆಗ ಜ್ಯೋತಿಷಿ ನಿಮ್ಮ ಮಗ ಒಬ್ಬನೇ ಮನೆಯಿಂದ ಹೊರಹೋಗುವ ಹಾಗಿಲ್ಲ, ಹೋದರೆ ಆತನ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ. ಆಗಲೇ ತೀರ್ಮಾನಕ್ಕೆ ಬಂದ ತಾಯಿ ಮಗನನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಕೂರಿಸುತ್ತಾರೆ. ಕಲಿಕೆಯಲ್ಲಿ ತುಂಬಾ ಆಸಕ್ತಿ ಹೊಂದಿರುವ ಶಿವನೇಶ್ ಖುದ್ದಾಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ತನ್ನ ಕಷ್ಟವನ್ನು ತೋಡಿಕೊಂಡನು. ಅಧಿಕಾರಿಗಳು ಬಂದು ಬಾಲಕನನ್ನು ಕಾಪಾಡಿದ್ದು ಮಾತ್ರವಲ್ಲದೆ ಶಾಲೆಗೆ ಮತ್ತೆ ಕಳುಹಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಮಕ್ಕಳ ಸಹಾಯವಾಣಿಯ ಸದಸ್ಯ ಆರ್. ಮಣಿವಣ್ಣಮ್, ತನ್ನ ತಾಯಿ ಶಾಲೆಗೆ ಹೋಗಲು ಬಿಡುವುದಿಲ್ಲವೆಂದು ಬಾಲಕ ನಮಗೆ ಕರೆ ಮಾಡಿದನು. ಜ್ಯೋತಿಷಿಯ ಮಾತು ಕೇಳಿ ತಾಯಿ ಈ ರೀತಿ ಮಾಡಿದ್ದಾರೆ ಎಂದು ಕೇಳಿ ನಮಗೆ ನಿಜಕ್ಕೂ ಆಘಾತವುಂಟಾಯಿತು ಎನ್ನುತ್ತಾರೆ ಅವರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವನೇಶ್, ಶಾಲೆಗೆ ಹೋಗುವುದನ್ನು ನಮ್ಮ ತಾಯಿ ಹಠಾತ್ತಾಗಿ ತಡೆದಾಗ ನನಗೆ ಏನು ಮಾಡಬೇಕು ಗೊತ್ತಾಗಲಿಲ್ಲ. ನನ್ನ ಸ್ನೇಹಿತರು ಶಾಲೆಗೆ ಹೋಗುತ್ತಿದ್ದರೆ ನನ್ನನ್ನು ಅಮ್ಮ ಮನೆಯಲ್ಲಿ ಕೂರುವಂತೆ ಹೇಳುತ್ತಿದ್ದರು. ನನ್ನ ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗುತ್ತಿತ್ತು. ನಾನು ಶಾಲೆಗೆ ಹೋಗಬೇಕೆಂದು ಹಠ ಮಾಡುತ್ತಿದ್ದರೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಖಾಸಗಿಯಾಗಿ ಕುಳಿತು ಬರೆಯಬಹುದೆಂದು ಹೇಳುತ್ತಿದ್ದರು. ನನ್ನ ತಾಯಿ ಕೂಲಿ ಕಾರ್ಮಿಕಳು. ನಾನು ಚೆನ್ನಾಗಿ ಓದಿ ಉದ್ಯೋಗ ಪಡೆದು ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂಬುದು ನನ್ನ ಆಸೆಯಾಗಿದೆ ಎನ್ನುತ್ತಾಳೆ ಶಿವನೇಶ್, ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಶಿವನೇಶ್ ನ ಅಕ್ಕ ತಿರುಕ್ಕುವಲೈಯಲ್ಲಿ ಮತ್ತೊಂದು ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. 
ನಮಗೆ ದೂರು ಬಂದ ತಕ್ಷಣ ಜ್ಯೋತಿ ಲಕ್ಷ್ಮಿ ನೇತೃತ್ವದ ನಮ್ಮ ತಂಡ ಬಾಲಕನ ಮನೆಗೆ ಹೋದರು. ಸೆಲ್ವಿಯ ಪತಿ ದೂರವಾಗಿದ್ದರಿಂದ ಇಬ್ಬರು ಮಕ್ಕಳನ್ನು ತಾನೇ ಸಾಕುತ್ತಿದ್ದಳು. ಮಕ್ಕಳ ಮೇಲೆ ತೀವ್ರ ಅಕ್ಕರೆಯಿತ್ತು. ಕಳೆದೆರಡು ದಿನಗಳಿಂದ ನಮ್ಮ ತಂಡದವರು ಬಾಲಕನ ತಾಯಿಗೆ ಸಮಾಲೋಚನೆ ನೀಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಾಯಿಗೆ ವಿವರಿಸಿದ್ದಾರೆ. ಕೊನೆಗೂ ಆಕೆ ಮಗನನ್ನು ಮತ್ತೆ ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ ಎನ್ನುತ್ತಾರೆ ಮಕ್ಕಳ ಸಹಾಯವಾಣಿಯ ಯೋಜನಾ ನಿರ್ದೇಶಕ ಕೃಷ್ಣ ಕುಮಾರ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com