ಸಂಗ್ರೂರು(ಪಂಜಾಬ್): ರೈತರ ಜೊತೆ ಬೆರೆಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಗ್ರಾಮಸ್ಥರೊಂದಿಗೆ ಕುಳಿತು ದಾಲ್ ಸಬ್ಜಿ ಸವಿದರು, ಅವರೊಂದಿಗೆ ಮಾತನಾಡಿ ಕೆಲಹೊತ್ತು ಕಾಲ ಕಳೆದರು. ಇದು ರಾಹುಲ್ ಗಾಂಧಿ ಪಂಜಾಬ್ ರಾಜ್ಯ ಚುನಾವಣೆಯ ಕೊನೆಯ ದಿನದ ಪ್ರಚಾರದ ವೇಳೆ ಕಳೆದ ವೈಖರಿ.
ನೀಲಿ ಬಣ್ಣದ ಡೆನಿಮ್, ಬಿಳಿ ಕುರ್ತಾ ಮತ್ತು ಅರ್ಧ ಜಾಕೆಟ್ ಧರಿಸಿದ್ದ ರಾಹುಲ್ ಗಾಂಧಿ ಮರದ ಮಣೆಯ ಮೇಲೆ ಕುಳಿತಿದ್ದರು. ಬಲಿಯಾದ ಗ್ರಾಮದ ಮುಖ್ಯಸ್ಥರು, ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದು ಸಂವಾದ ನಡೆಸಿದರು. ರಾಹುಲ್ ಗಾಂಧಿ ಜೊತೆ ಕೆಲವು ಗ್ರಾಮಸ್ಥರು ಸಹ ಕುಳಿತು ಆಹಾರ ಸೇವಿಸಿದರು.
ಗ್ರಾಮಸ್ಥರು ತಮ್ಮ ಸಮಸ್ಯೆ ಹೇಳಿಕೊಂಡಾಗ ರಾಹುಲ್ ಗಾಂಧಿ, ಕಾಂಗ್ರೆಸ್ ಗೆ ಮತ ಹಾಕಿ. ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನಿಮ್ಮ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಪಂಜಾಬ್ ರಾಜ್ಯದಲ್ಲಿ ಇಂದು ಸಂಜೆ 5 ಗಂಟೆಗೆ ಚುನಾವಣಾ ಪ್ರಚಾರ ಮುಕ್ತಾಯವಾಗಲಿದೆ. 117 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಶನಿವಾರ ಚುನಾವಣೆ ನಡೆಯಲಿದೆ.
ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ಹಣಾಹಣಿಯಿದೆ.