

ವಿಜಯವಾಡ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಂತಹ ದೊಡ್ಡ ಜೋಕರ್ ಗಳು ನಿಮಗೆ ಮುಖ್ಯಮಂತ್ರಿಯಾಗಬೇಕೇ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಳಿದ್ದಾರೆ.
ಭಾನುವಾರ ವಿಜಯವಾಡದ ಲಯೋಲಾ ಕಾಲೇಜು ಮೈದಾನದಲ್ಲಿ ನಡೆದ ಮಂಡಲ ಶಿಕ್ಷಣ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಚಂದ್ರಬಾಬು ನಾಯ್ಡು ಅವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪರೋಕ್ಷವಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಟೀಕಿಸಿದ ನಾಯ್ಡು ಅವರ ಹೆಸರು ಹೇಳದೆಯೇ, ಡೊನಾಲ್ಡ್ ಟ್ರಂಪ್ ರಂತಹ ಜೋಕರ್ ಗಳು ಈ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದರು.
ನೇರವಾಗಿ ಜಗನ್ ರನ್ನು ಡೊನಾಲ್ಡ್ ಟ್ರಂಪ್ ಗೆ ಹೋಲಿಸಿದ ನಾಯ್ಡು, ಪ್ರತಿಪಕ್ಷಕ್ಕೆ ಅಧಿಕಾರ ಕೊಟ್ಟರೆ ಪ್ರಸ್ತುತ ಅಮೆರಿಕದಲ್ಲಿ ಸೃಷ್ಟಿಯಾಗಿರುವ ಸ್ಥಿತಿ ಆಂಧ್ರ ಪ್ರದೇಶದಲ್ಲೂ ನಿರ್ಮಾಣವಾಗುತ್ತದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವನ್ನೇ ಬೆಂಬಲಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು. ಈ ಹಿಂದೆ 2004ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ನಾಯ್ಡು ಅವರ ನೇತೃತ್ವ ಟಿಡಿಪಿ ಪಕ್ಷದ ಸೋಲಿಗೆ ಶಿಕ್ಷಕರ ವಲಯದ ಅಸಂತೃಪ್ತಿಯೇ ಕಾರಣ ಎಂದು ಹೇಳಲಾಗಿತ್ತು. ಅಂಧ್ರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಗಳೂ ಕೂಡ ಶಿಕ್ಷಕರ ವಲಯ ಚಂದ್ರಬಾಬು ನಾಯ್ಡು ಅವರ ವಿರುದ್ಧವಾಗಿದೆ ಎಂದು ಹೇಳಿದ್ದವು.
ಈ ಹಿನ್ನಲೆಯಲ್ಲಿ ವಿಜಯವಾಡದ ಲಯೋಲಾ ಕಾಲೇಜು ಮೈದಾನದಲ್ಲಿ ನಡೆದ ಮಂಡಲ ಶಿಕ್ಷಣ ಅಧಿಕಾರಿಗಳ ಸಮ್ಮೇಳನವನ್ನು ಬಳಸಿಕೊಂಡ ನಾಯ್ಡು, ಶಿಕ್ಷಕರಲ್ಲಿರುವ ತಮ್ಮ ವಿರುದ್ಧದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಅಂತೆಯೇ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಟಿಡಿಪಿ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.
"ಅಮೆರಿಕದ ಅಧಿಕಾರವನ್ನು ಅಸಮರ್ಥ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದರಿಂದ ಹೇಗೆ ಅಧಿಕಾರ ದುರ್ಬಳಕೆಯಾಗುತ್ತಿದೆಯೋ ಹಾಗೆಯೇ ರಾಜ್ಯದ ಅಧಿಕಾರವನ್ನು ಅಸಮರ್ಥರಿಗೆ ನೀಡಿದರೆ ಅದೇ ಪರಿಸ್ಥಿತಿ ಬಂದೊದಗುತ್ತದೆ ಎಂದು ನಾಯ್ಡು ಎಚ್ಚರಿಕೆ ನೀಡಿದರು.