

ಚಂಡೀಗಢ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಗೆ ಉಚಿತ ತರಕಾರಿ ನೀಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಪ್ರಗತಿಪರ ಕಿಸಾನ್ ಸಂಘದ ರೈತರು ರಾಯ್ಪುರದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತರಕಾರಿಗಳ ಬೆಲೆ ಅತ್ಯಂತ ಕಡಿಮೆಯಾಗಿದ್ದು, ಹೀಗಾಗಿ ಮಾರಾಟ ಮಾಡಿಲ್ಲ. ಪ್ರತೀಬಾರಿ ನವೆಂಬರ್ ತಿಂಗಳಿನಲ್ಲಿ ತರಕಾರಿಗಳ ಬೆಲೆ ದುಬಾರಿಯಾಗಿರುತ್ತದೆ. ಮಾರ್ಚ್ ತಿಂಗಳಿನಲ್ಲಿ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ನವೆಂಬರ್ ತಿಂಗಳಿನಲ್ಲಿಯೇ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಹೂಡಿಕೆ ಮಾಡಲಾಗಿರುವ ಹಣ ಕೂಡ ನಮಗೆ ಬರುತ್ತಿಲ್ಲ ಎಂದು ರೈತರು ಹೇಳಿಕೊಂಡಿದ್ದಾರೆ.
ರೈತರುಉಚಿತವಾಗಿ ತರಕಾರಿಗಳನ್ನು ನೀಡಲೇಬೇಕಾದ ಸಂದರ್ಭ ಎದುರಾಗಿದೆ. ಟಮೋಟಾ ಬೆಲೆ ಕಡಿಮೆಯಾದರೆ, ಸಾಮಾನ್ಯವಾಗಿಯೇ ಇತರೆ ತರಕಾರಿಗಳ ಬೆಲೆಗಳು ಕೂಡ ಕಡಿಮೆಯಾಗುತ್ತದೆ. ನೋಟು ನಿಷೇಧದಿಂದಾಗಿ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಚಂಡೀಗಢದಿಂದ ಟಮೋಟೋಗಳು ಕೇವಲ ದೇಶಕ್ಕಷ್ಟೇ ಅಲ್ಲದೆ, ಇತರೆ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಆದರೆ, ಈ ಬಾರಿ ಸಾರಿಗೆ ಸಮಸ್ಯೆಯುಂಟಾದ ಕಾರಣ ತರಕಾರಿಗಳನ್ನು ರಫ್ತು ಮಾಡಲು ಸಾಧ್ಯವಾಗಿಲ್ಲ. ಇದೀಗ ದುರ್ಗದಲ್ಲಿರುವ ಜನರು ಹಾಗೂ ಖಾರುಲ್ ನದಿ ಬಳಿರುವ ಜನರು ಮನಸ್ಸಿಲ್ಲದಿದ್ದರೂ ಬಲವಂತವಾಗಿ ಉಚಿತವಾಗಿ ತರಕಾರಿಗಳನ್ನು ನೀಡುವ ಪರಿಸ್ಥಿತಿ ಎದುರಾಗಿದೆ ಎಂದು ರೈತ ಸಂಘಟನೆಯ ಸದಸ್ಯ ಜಯೇಶ್ ವರು ಅವರು ತಿಳಿಸಿದ್ದಾರೆ.
ನವೆಂಬರ್ 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರು.500 ಹಾಗೂ 1000 ನೋಟುಗಳ ಮೇಲೆ ನಿಷೇಧ ಹೇರಿದ್ದರು. ಕೇಂದ್ರ ಈ ದಿಢೀರ್ ನಿರ್ಧಾರದಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿತ್ತು. ಪ್ರಮುಖವಾಗಿ ರೈತರ ಮೇಲೆ ಗಭೀರವಾದ ಪರಿಣಾಮ ಬೀರಿತ್ತು.