

ನವದೆಹಲಿ: ಭೀಕರ ಬರ ಹಾಗೂ ಮಳೆ ಕೊರತೆಯಿಂದಾಗಿ ತತ್ತರಿಸಿ ಹೋಗಿದ್ದ ರಾಜ್ಯಕ್ಕೆ ರು.1,782.44 ಕೋಟಿ ಹಣವನ್ನು ಬರ ಪರಿಹಾರವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ಸೂಚಿಸಿದೆ.
ರಾಜಧಾನಿ ದೆಹಲಿಯಲ್ಲಿ ಇಂದು ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ರಾಜ್ಯಕ್ಕೆ ರು.1,782.44 ಕೋಟಿ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ.
ಕರ್ನಾಟಕ ಹಾಗೂ ಉತ್ತರಾಖಂಡದಲ್ಲಿ ಸಂಭವಿಸಿದ್ದ ಭೀಕರ ಬರ ಹಾಗೂ ಪ್ರವಾಹ ಕುರಿತಂತೆ ಆಂತರಿಕ ಸಚಿವಾಲಯದ ತಂಡ ಸಲ್ಲಿಸಿದ್ದ ವರದಿಯನ್ನು ಇಂದು ಪರಿಶೀಲನೆ ನಡೆಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪಡೆ ನಿಧಿ ಹಾಗೂ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಉತ್ತರಾಖಂಡ ರಾಜ್ಯಕ್ಕೆ ರು.208.91 ಕೋಟಿ ಹಾಗೂ ಬರ ಪೀಡಿತ ರಾಜ್ಯಕ್ಕೆ 1.782.44 ಕೋಟಿ ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.
ಉನ್ನತ ಮಟ್ಟದ ಸಭೆಯಲ್ಲಿ ಉಪಾಧ್ಯಕ್ಷ ಅರವಿಂದ ಪನಗರಿಯಾ, ನೀತಿ ಆಯೋಗ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಮತ್ತು ಹಣಕಾಸು, ಕೃಷಿ ವಿಭಾಗ, ಆಂತರಿಕ ಗೃಹ ಸಚಿವಾಲಯದ ಇತರೆ ಅಧಿಕಾರಿಗಳು ಹಾಜರಿದ್ದರು.
ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಹಿನ್ನಲೆಯಲ್ಲಿ ರು. 14,471 ಕೋಟಿ ಮೌಲ್ಯದ ಕೃಷಿ ಹಾಗೂ ರು.1164 ಕೋಟಿ ಮೌಲ್ಯದ ತೋಟಗಾರಿಕಾ ಬೆಳೆಯೂ ಸೇರಿದಂತೆ ರು, 15, 636 ಕೋಟಿ ನಷ್ಟ ಉಂಟಾಗಿ ರೈತರು ಕಂಗಾಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಬರ ಪರಿಹಾರ ನಿಧಿಯ ನಿಯಮಾವಳಿಯ ಪ್ರಕಾರ ರು. 3,830 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ಹಿಂದೆ ಮನವಿ ಮಾಡಿಕೊಂಡಿತ್ತು. ಆದರೆ, ಕೇಂದ್ರ ಕೇವಲ 1,782.44 ಕೋಟಿಯನ್ನಷ್ಟೇ ಪರಿಹಾರ ಧನವಾಗಿ ಬಿಡುಗಡೆ ಮಾಡಿದೆ.