ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾಪಡೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡುತಾಣಗಳ ಮೇಲೆ ದಾಳಿ ನಡೆಸಿ ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿರವುದಾಗಿ ಭಾನುವಾರ...
ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾಪಡೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡುತಾಣಗಳ ಮೇಲೆ ದಾಳಿ ನಡೆಸಿ ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿರವುದಾಗಿ ಭಾನುವಾರ ತಿಳಿದುಬಂದಿದೆ.
ಹಿಜ್ಪುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿರುವ ಪರ್ವೇಜ್ ವಾನಿ ನೇತೃತ್ವದಲ್ಲಿ ಬಾರಾಮುಲ್ಲಾದ ಮನೆಯೊಂದರಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸುವ ದೇಶದ್ರೋಹ ಕೆಲಸಗಳನ್ನು ಮಾಡಲಾಗುತ್ತಿತ್ತು. ಪರ್ವೇಜ್ ವಾನಿ ಮೂಲತಃ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದ ನಿವಾಸಿಯಾಗಿದ್ದಾನೆ. ಯುವಕರನ್ನು ನೇಮಕ ಮಾಡಿಕೊಂಡ ಬಳಿಕ ಉಗ್ರರ ಕ್ಯಾಂಪ್ ಗಳಲ್ಲಿ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ಕಳುಹಿಸಲು ಯತ್ನ ನಡೆಸಲಾಗುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇನಾ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿದೆ.
ಪ್ರಸ್ತುತ ಬಂಧನಕ್ಕೊಳಗಾರಿರುವ ಅಬ್ದುಲ್ ರಷೀದ್ ಭಟ್ ಕಳೆದ ಮೇ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಪಾಕಿಸ್ತಾನದ ಉಗ್ರ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಖಾಲಿದ್ ಬಿನ್ ವಾಲೀಂ ಕ್ಯಾಂಪ್ ನಲ್ಲಿ ತರಬೇತಿ ಪಡೆದ ಬಳಿಕ ಭಾರತಕ್ಕೆ ಮರಳಿದ್ದ. ಪ್ರತ್ಯೇಕತಾವಾದಿಗಳ ಸಂಘಟನೆಯ ಶಿಫಾರಸ್ಸಿನ ಮೇರೆಗೆ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಮುಖಾಂತರದಿಂದಲೇ ರಷೀದ್ ವೀಸಾ ಪಡೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದಾಳಿ ವೇಳೆ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ರೂ.1 ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.