

ಹೈದರಾಬಾದ್: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆ ಕುರಿತಂತೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿ ಎಂದು ಉಭಯ ರಾಜ್ಯ ಸರ್ಕಾರಗಳಿಗೆ ಹೇಳಿದೆ.
ಗೋ ಸಾಕಾಟದಾರರೊಬ್ಬರು ಸಾಗಿಸುತ್ತಿದ್ದ ರಾಸುಗಳನ್ನು ಗೋಸಂರಕ್ಷಕರು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ಹೈದರಾಬಾದ್ ಹೈಕೋರ್ಟ್, ಗೋ ಕಾನೂನನ್ನು ಜಾರಿಗೊಳಿಸುವಂತೆ ಉಭಯ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಮಹತ್ವದ ತೀರ್ಪು ನೀಡಿದ ಜಸ್ಟಿಸ್ ಬಿ ಶಿವ ಶಂಕರ ರಾವ್ ಅವರು, ಗೋವು ರಾಷ್ಟ್ರದ ಪವಿತ್ರ ಸಂಪತ್ತಾಗಿದೆ. ಅದನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಗೋ ಹತ್ಯೆ ಯನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡುವಂತೆ ಹೇಳಿದ್ದಾರೆ.
ಆಂಧ್ರ ಪ್ರದೇಶದ ಕಾಂಚನಪಲ್ಲಿಯಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಸುಮಾರು 63 ರಾಸುಗಳನ್ನು ಗೋ ಸಂರಕ್ಷಕ ಸಂಘಟನೆ ಕಾರ್ಯಕರ್ತರು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸರು ಕೂಡ ಗೋ ಹತ್ಯೆ ನಿಷೇಧ ಕಾಯ್ದೆ ಕಲಂ 5, 6, 10 ಮತ್ತು ಪ್ರಾಣಿ ಸಂರಕ್ಷಣೆ ಕಾಯ್ದೆ 2 (1977) ಮತ್ತು ಪ್ರಾಣಿ ಕ್ರೌರ್ಯ ನಿಗ್ರಹ ಕಾಯ್ದೆ 1960, ಕಲಂ 11 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ತಮ್ಮ ರಾಸುಗಳನ್ನು ವಾಪಸ್ ಕೊಡಿಸುವಂತೆ ಸಾಗಾಟದಾರರು ಸ್ಥಳೀಯ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಕೂಡ ರಾಸುಗಳನ್ನು ವಾಪಸ್ ಮಾಡುವಂತೆ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶದ ವಿರುದ್ಧ ಗೋ ಸಂರಕ್ಷಕ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು. ರಾಮವತ್ ಹನುಮ ಎಂಬ ನಲ್ಗೊಂಡಾ ಮೂಲದವರು ಈ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅಂತೆಯೇ ಬಕ್ರೀದ್ ಹಬ್ಬಕ್ಕಾಗಿ ರಾಸುಗಳನ್ನು ಬಲಿಕೊಡಲು ಸಾಗಾಟ ಮಾಡಲಾಗುತ್ತಿತ್ತು ಎಂದು ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ಈ ಹಿಂದಷ್ಟೇ ರಾಜಸ್ತಾನ ಕೋರ್ಟ್ ನ್ಯಾಯಾಧೀಶರೊಬ್ಬರು ಗೋ ಸಂರಕ್ಷಣೆ ಕುರಿತಂತೆ ತೀರ್ಪು ನೀಡಿ ಭಾರಿ ಚರ್ಚೆಗೆ ಕಾರಣರಾಗಿದ್ದರು. ಅಂತೆಯೇ ಅವರ ರಾಷ್ಟ್ರ ಪಕ್ಷಿ ನವಿಲು ಗರ್ಭಧಾರಣೆ ಕುರಿತ ಹೇಳಿಕೆ ದೇಶಾದ್ಯಂತ ವೈರಲ್ ಆಗಿತ್ತು.