

ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆಯುತ್ತಿದ್ದ ಎನ್ ಕೌಂಟರ್ ಅಂತ್ಯವಾಗಿದ್ದು, ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚಿಲ್ಲಿ ಪೊರಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರರಿಗಾಗಿ ನಡೆಸಲಾಗುತ್ತಿದ್ದ ಎನ್ ಕೌಂಟರ್ ಅನ್ನು ಶನಿವಾರ ಅಂತ್ಯಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಶುಕ್ರವಾರ ರಾತ್ರಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದರು. ಈ ಹಿನ್ನಲೆಯಲ್ಲಿ ಉಗ್ರರನ್ನು ಸದೆಬಡಿಯಲು ಸೇನೆ ಪಡೆ ಹಾಗೂ ವಿಶೇಷ ಕಾರ್ಯಾಚರಣಾ ತಂಡ ಜಂಟಿಯಾಗಿ ಕಾರ್ಯಾಚರಣೆಗಿಳಿದಿತ್ತು. ಸತತ 8 ಗಂಟೆಗಳ ಕಾರ್ಯಾಚರಣೆ ನಂತರ ಇದೀಗ ಉಗ್ರರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸೇನಾ ಪಡೆಗಳ ಕಾರ್ಯಾಚರಣೆಗೆ ಹೆದರಿರುವ ಉಗ್ರರು ಇದೀಗ ಸ್ಥಳದಿಂದ ಕಾಲ್ಕಿತ್ತಿದ್ದು, ಎನ್ ಕೌಂಟರ್ ಅಂತ್ಯಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು.