

ಲಖನೌ: ತಮ್ಮ ಕಠಿಣ ನಿರ್ಣಯಗಶ ಮುಖಾಂತರವೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರು ಮತ್ತೆ ತಮ್ಮ ಅಚ್ಚರಿಯ ನಿರ್ಧಾರದಿಂದ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ತಮ್ಮ ಕಠಿಣ ಮತ್ತು ಮಹತ್ವದ ನಿರ್ಧಾರಗಳಿಂದಾಗಿ ಈಗಾಗಲೇ ಜನಪ್ರಿಯತೆಗಳಿಸಿರುವ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಫೈರ್ ಬ್ರ್ಯಾಂಡ್ ಮುಖಂಡ ಯೋಗಿ ಆದಿತ್ಯನಾಥ್ ಈಗ ಮತ್ತೊಂದು ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಫೋಟೋ ಹೊಂದಿರುವ ಶಾಲಾ ಬ್ಯಾಗ್ ಗಳನ್ನು ಮಕ್ಕಳಿಗೆ ವಿತರಿಸುವ ಮೂಲಕ ಯೋಗಿ ಆದಿತ್ಯಾನಾಥ್ ಅಚ್ಚರಿಗೆ ಕಾರಣರಾಗಿದ್ದಾರೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷದ ಮುಖಂಡನ ಭಾವಚಿತ್ರವಿರುವ ಬ್ಯಾಗ್ ಗಳನ್ನು ಹಂಚುವುದು ವಾಡಿಕೆ.
ಆದರೆ ಯೋಗಿ ಆದಿತ್ಯಾನಾಥ್ ತಾವು ಸಿಎಂ ಆಗಿದ್ದರೂ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಭಾವಚಿತ್ರಗಳಿರುವ ಬ್ಯಾಗ್ ಗಳನ್ನು ಹಂಚಿಕೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ. ಅಚ್ಚರಿಯಾದರೂ ಇದು ಸತ್ಯ...ಹಾಲಿ ಮುಖ್ಯಮಂತ್ರಿಗಳ ಫೋಟೋ ಬದಲು ಮಾಜಿ ಸಿಎಂ ಫೋಟೋ ಬಳಕೆ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಸುಳಿದಾಡುತ್ತಿರಬಹುದು.. ಅದಕ್ಕೆ ಯೋಗಿ ಆದಿತ್ಯಾ ನಾಥ್ ಅವರ ಉತ್ತರ ಕೇಳಿದರೆ ಬಹುಶಃ ಅವರ ಮೇಲಿನ ಗೌರವ ಹೆಚ್ಚಾಗಬಹುದು.
ಜನರ ಹಣ ಪೋಲಾಗುವುದನ್ನು ತಡೆಯಲು ಯೋಗಿ ಆದಿತ್ಯಾನಾಥ್ ಅವರು ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಸಲಿಗೆ ಪ್ರಸ್ತುತ ಅಖಿಲೇಶ್ ಯಾದವ್ ಅವರ ಭಾವಚಿತ್ರವಿರುವ ಬ್ಯಾಗ್ ಗಳು ಇತ್ತೀಚೆಗೆ ತಯಾರಾಗಿದ್ದಲ್ಲ. ಬದಲಿಗೆ ಈ ಹಿಂದೆ ಅಧಿಕತಾರದಲ್ಲಿದ್ದ ಸಮಾಜವಾದಿ ಪಕ್ಷದ ಆಡಳಿತವಿದ್ದ ಸಂದರ್ಭದಲ್ಲಿ ತಯಾರಾಗಿದ್ದ ಬ್ಯಾಗ್ ಗಳಿವು. ಆದರೆ ಅಂದು ಕಾರಣಾಂತರಗಳಿಂದ ಈ ಬ್ಯಾಗ್ ಗಳು ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿರಲಿಲ್ಲ. ಅದಕ್ಕೆ ತಕ್ಕಂತೆ ವಿಧಾನಸಭಾ ಚುನಾವಣೆಯಲ್ಲಿ ಎಸ್ ಪಿ ಪಕ್ಷ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡಿತು.
ಹೀಗಾಗಿ ಈ ಬ್ಯಾಗ್ ಗಳು ಗೋದಾಮಿನಲ್ಲಿ ಧೂಳು ಹಿಡಿಯುತ್ತಿತ್ತು. ಆದರೆ ಈ ಬಗ್ಗೆ ಮಾಹಿತಿ ಪಡೆದ ಸಿಎಂ ಯೋಗಿ ಆದಿತ್ಯಾನಾಥ್ ಅವರು, ಸಾರ್ವಜನಿಕರ ಹಣ ಪೋಲಾಗಬಾರದು ಎಂಬ ಕಾಳಜಿಯಿಂದಾಗಿ ಅಖಿಲೇಶ್ ಯಾದವ್ ಅವರ ಚಿತ್ರವಿರುವ ಶಾಲಾ ಬ್ಯಾಗ್ ಗಳನ್ನು ಮಕ್ಕಳಿಗೆ ವಿತರಿಸುವಂತೆ ಆದೇಶ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಯೋಗಿ ಆದಿತ್ಯನಾಥ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ಈ ಗೌರವ ಸೂಚಕ ನಿರ್ಧಾರದ ಬಗ್ಗೆ ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.