ಪೈಶಾಚಿಕ ಕೃತ್ಯಕ್ಕೆ ಸಿಡಿದೆದ್ದ ಸೇನೆ: ಉಗ್ರರಿಗಾಗಿ ಕಾಶ್ಮೀರದಲ್ಲಿ ಮನೆ ಮನೆ ಹುಡುಕಾಟ

Published On :
ಶ್ರೀನಗರ: ಉಗ್ರರ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸಿಡಿದೆದ್ದಿದ್ದು, 1990ರ ದಶಕದಲ್ಲಿ ನಿಲ್ಲಿಸಲಾಗಿದ್ದ ಮನೆ ಮನೆಗೆ ತೆರಳಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಗುರುವಾರದಿಂದ ಮತ್ತೆ ಆರಂಭಿಸಿದೆ.
ವಸತಿ ಪ್ರದೇಶಗಳಲ್ಲಿ ಅಡಗಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರರನ್ನು ಹೊರಗೆಳೆದು ಮಟ್ಟ ಹಾಕಲು ಸೇನೆ ಭಾರೀ ಪ್ರಮಾಣದ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಪ್ರಸ್ತುತ ಕಾಶ್ಮೀರದಲ್ಲಿ ಸೇನಾಪಡೆ ನಡೆಸುತ್ತಿರುವ ಕಾರ್ಯಾಚರಣೆ ದಶಕದಲ್ಲೇ ಭಾರೀ ಪ್ರಮಾಣದ ಕಾರ್ಯಾಚರಣೆ ಎಂದೇ ಹೇಳಲಾಗುತ್ತಿದೆ.
ಹೆಲಿಕಾಪ್ಟರ್, ಡ್ರೋನ್ ಗಳ ಸಹಾಯದಿಂದ 4 ಸಾವಿರ ಯೋಧರು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನೆ, ಪೊಲೀಸ್ ಹಾಗೂ ಸಿಆರ್ ಪಿಎಫ್ ಸಿಬ್ಬಂದಿಯನ್ನು ಒಳಗೊಂಡ ಭದ್ರತಾ ತಂಡ ನಿನ್ನೆ ಬೆಳಿಗ್ಗೆಯಿಂದಲೇ ಶೋಪಿಯಾನ್ ಹಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ಸೇನಾ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಶೋಪಿಯಾನ್ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಫ್ ಸುಗಾನ್, ಚಿಲ್ಲಿಪೊರಾ, ಮಲ್ನಾಡ್, ತುರ್ಕಾ ವಂಗಮ್ ಮ್ತತು ಇನ್ನಿತರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪ್ರತಿ ಹಳ್ಳಿಗೆ ತೆರಳುವ ಭದ್ರತಾ ಸಿಬ್ಬಂದಿ, ಗ್ರಾಮಸ್ಥರನ್ನು ಒಂದು ಕಡೆ ಕಲೆ ಹಾಕಿ, ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ, ಉಗ್ರರು ಶೋಪಿಯಾನ್ ಜಿಲ್ಲೆಯಲ್ಲಿದ್ದಾರೆಂಬ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಕಾರ್ಯಾಚರಣೆ ಅಡ್ಡಿಪಡಿಸಲು ಸ್ಥಳೀಯರು ಸೇನಾಪಡೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ತುರ್ಕ ವಂಗಮ್ ಮತ್ತು ಸುಗನ್ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಯುವಕರ ಕಣ್ಣುಗಳಿಗೆ ಪೆಲೆಟ್ ಗನ್ ಗಳಿಂದ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ. ಇಮಾಮ್ ಸಾಹಿಬ್ ಗ್ರಾಮದಲ್ಲಿ 62 ರಾಷ್ಟ್ರೀಯ ರೈಫಲ್ಸ್ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಯೋಧರಿಗೆ ಗಾಯವಾಗಿರುವುದಾಗಿ ಹೇಳಲಾಗುತ್ತಿದೆ.
ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಗಳ ಪ್ರಕಾರ, 30ಕ್ಕೂ ಹೆಚ್ಚು ಉಗ್ರರು ಕಾಶ್ಮೀರದ ಗ್ರಾಮಗಳಲ್ಲಿ ಓಡಾತ್ತಿದ್ದು, ಈ ಬಗೆಗಿನ ವಿಡಿಯೋಗಳು ಸಾಮಾಜಿಕ ಜಾಣಗಳಲ್ಲಿ ವೈರಲ್ ಆಘಿತ್ತು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಕುಲ್ಗಾಂ ಜಿಲ್ಲೆಯ ಖುದ್ವಾನಿಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಭಯೋತ್ಪಾದಕರು ಅಡಗಿಕುಳಿತಿರುವುದಾಗಿ ಖಚಿತ ಮಾಹಿತಿ ಸೇನೆಗೆ ಬಂದಿತ್ತು. ಕಾರ್ಯಾಚರಣೆ ವೇಳೆ ಸಾರ್ವಜನಿಕರ ಸಹಾಯದಿಂದ ಉಗ್ರರು ತಪ್ಪಿಸಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಪ್ರಸ್ತುತ ಶೋಪಿಯಾನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಭಾರೀ ಪ್ರಮಾಣದ ಕಾರ್ಯಾಚರಣೆಯಾಗಿದೆ ಎಂದು ಗುಪ್ತಚರ ದಳದ ಅಧಿಕಾರಿ ತಿಳಿಸಿದ್ದಾರೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಮೇರೆಗೆ ಸೇನಾ ಪಡೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿತ್ತು. ಇದರಂತೆ ಕಾರ್ಯಾಚರಣೆಗೆ ಸಮಸ್ಯೆಗಳಾಗದಂತೆ ಗ್ರಾಮಸ್ಥರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ತಿಳಿಸಿದ್ದರು. ಈ ವರೆಗೂ ಯಾವುದೇ ಉಗ್ರರೊಂದಿಗೆ ಮಾತುಕತೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಉಮೆರ್ ಮಜೀದ್ ಕುರಿತಂತೆ ಮಾಹಿತಿ ಕೊಟ್ಟವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಘೋಷಣೆ ಮಾಡಿದ್ದಾರೆ. ಕುಲ್ಗಾಮ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ದಾಳಿಯಲ್ಲಿ 5 ಪೊಲೀಸರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದರು. ದಾಳಿಯಲ್ಲಿ ಉಮೆರ್ ಮಜೀಸ್ ಪ್ರಮುಖ ಆರೋಪಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಉಗ್ರರುPakistanಪಾಕಿಸ್ತಾನKashmirterroristಕಾಶ್ಮೀರಭಾರತೀಯ ಸೇನೆMassive operationಭಾರೀ ಕಾರ್ಯಾಚರಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


