

ಚೆನ್ನೈ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕಲ್ಕತಾ ಹೈಕೋರ್ಟ್‌ನ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರನ್ನು ಬಂಧಿಸುವ ನಿಟ್ಟಿನಲ್ಲಿ 3 ರಾಜ್ಯಗಳ ಪೊಲೀಸರು ತೀವ್ರ ಶೋಧದಲ್ಲಿ ತೊಡಗಿದ್ದಾರೆ.
ಜಸ್ಚಿಸ್ ಕರ್ಣನ್ ಅವರನ್ನು ಬಂಧಿಸುವ ಸಲುವಾಗಿ ನಿನ್ನೆ ಕೋಲ್ಕತಾ ಪೊಲೀಸರು ಚೆನ್ನೈಗೆ ಆಗಮಿಸಿದ್ದರು. ಆದರೆ ನ್ಯಾ.ಕರ್ಣನ್ ಅವರು ಬುಧವಾರ ಬೆಳಗ್ಗೆಯೇ ಆಂಧ್ರಪ್ರದೇಶ ಶ್ರೀಕಾಳಹಸ್ತಿ ದೇಗುಲಕ್ಕೆ ತೆರಳಿದ್ದು, ಸಂಜೆಯ ವೇಳೆಗೆ ಚೆನ್ನೈಗೆ ಮರಳುವ ನಿರೀಕ್ಷೆ ಇತ್ತು. ಆದರೆ ಸಂಜೆಯಾದರೂ ಅವರು ಚೆನ್ನೈಗೆ ಮರಳಿಲ್ಲ. ಹೀಗಾಗಿ ಅವರಿಗಾಗಿ ಇದೀಗ ಆಂಧ್ರಪ್ರದೇಶ ಮತ್ತು ತಮಿಳುನಾಡು ಪೊಲೀಸರು ಉಭಯ ರಾಜ್ಯಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ರಾಜ್ಯದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದ ನ್ಯಾಯಮೂರ್ತಿ ಕರ್ಣನ್ ಅವರು ಬಿಲ್ ಪಾವತಿ ಮಾಡದೇ ಅಲ್ಲಿಂದ ತೆರಳಿದ್ದರು. ಇದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಶ್ರೀಕಾಳಹಸ್ತಿ ದೇಗುಲಕ್ಕೆ ಕರ್ಣನ್ ಪ್ರಯಾಣಿಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಅವರು ಕಾಳಹಸ್ತಿಯಲ್ಲಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮೂ ರು ರಾಜ್ಯಗಳ ಪೊಲೀಸರು ಜಸ್ಟಿಸ್ ಕರ್ಣನ್ ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕರ್ಣನ್ ಅವರಿಗೆ ಆಪ್ತರಾದ ಕೆಲವು ಮಂದಿ ಹೇಳುವಂತೆ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳವಾರ ಸುಪ್ರೀಂಕೋರ್ಟ್‌ನ ಸಪ್ತಸದಸ್ಯ ಪೀಠ, ನ್ಯಾ.ಕರ್ಣನ್‌ಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿ, ತಕ್ಷಣವೇ ಬಂಧಿಸುವಂತೆ ಆದೇಶಿಸಿತ್ತು.