ನವದೆಹಲಿ: 2016-17 ನೇ ಸಾಲಿನ ಜಿಡಿಪಿ ಅಂಕಿ-ಅಂಶ ಬಿಡುಗಡೆಯಾಗಿದ್ದು, ನೋಟು ನಿಷೇಧದ ಪರಿಣಾಮದಿಂದಾಗಿ ಜಿಡಿಪಿ ಶೇ.7.1 ಕ್ಕೆ ಕುಸಿದಿದೆ.
ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿರುವುದರ ಹೊರತಾಗಿಯೂ ಜಿಡಿಪಿ ಕಡಿಮೆಯಾಗಿದೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧ ಮಾಡಿದ್ದರ ಪರಿಣಾಮವಾಗಿ ಜನವರಿ-ಮಾರ್ಚ್ ತಿಂಗಳ ಜಿಡಿಪಿ ಮೇಲೆ ಪರಿಣಾಮ ಬೀರಿದ್ದು, ಶೇ.7.9 ರಷ್ಟಿದ್ದ ಜಿಡಿಪಿ ದರ ಈಗ ಶೇ.7.1 ರಷ್ಟಿದೆ.
ಕೇಂದ್ರ ಅಂಕಿ-ಅಂಶಗಳ ಕಚೇರಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಜಿವಿಎ ಶೇ.7.9 ರಿಂದ ಶೇ.6.6 ಕ್ಕೆ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಮೂರು- ನಾಲ್ಕನೇ ತ್ರೈಮಾಸಿಕದಲ್ಲಿ ಸತತವಾಗಿ ಜಿವಿಎ ಕುಸಿತ ಕಂಡಿರುವುದು ಸಹ ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಸಹ ಕುಸಿದಿದ್ದು ಕಳೆದ ವರ್ಷ ಶೇ. 12.7 ರಷ್ಟಿದ್ದ ಉತ್ಪಾದನಾ ವಲಯದ ಜಿಡಿಪಿ ಈಗ ಶೇ.5.3 ರಷ್ಟಾಗಿದ್ದರೆ, ಕಟ್ಟಡ ನಿರ್ಮಾಣ ಕ್ಷೇತ್ರ ಋಣಾತ್ಮಕ ಅಂಶಕ್ಕೆ ಕುಸಿದಿದೆ.